ಸೌದಿ ಅರೇಬಿಯಾದಲ್ಲಿನ ಉದ್ಯೋಗವನ್ನೇ ನಂಬಿರುವ ಹಲವು ಭಾರತೀಯರಿಗೆ ಇದೀಗ ಉದ್ಯೋಗ ಕಳೆದುಕೊಳ್ಳುವ ಭೀತಿ ಆರಂಭವಾಗಿದೆ. ಸೌದಿ ಸರಕಾರ ತನ್ನ ದೇಶದಲ್ಲಿನ ನಿರುದ್ಯೋಗ ಕಡಿಮೆ ಮಾಡುವ ಸಲುವಾಗಿ ವಿದೇಶಿ ನೌಕರರಿಗೆ ಉದ್ಯೋಗ ಕೊಡುವ ಬದಲು ದೇಶದ ನಿರುದ್ಯೋಗಿ ಪ್ರಜೆಗಳಿಗೆ ಉದ್ಯೋಗ ಕೊಡುವಂತೆ ಹಲವು ಕಂಪೆನಿಗಳ ಮೇಲೆ ಒತ್ತಡ ಹೇರುತ್ತಿದೆ. ಹೀಗಾಗಿ ಸೌದಿ ಅರೇಬಿಯಾದಲ್ಲಿ ಸುಮಾರು 30 ಲಕ್ಷದಷ್ಟು ಭಾರತೀಯರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಸುಮಾರು 12 ಆಯ್ದ ಕ್ಷೇತ್ರಗಳಲ್ಲಿ ವಿದೇಶಿಯರಿಗೆ ಉದ್ಯೋಗಾವಕಾಶ ನೀಡುವಂತಿಲ್ಲ ಎಂಬ ಉದ್ಯೋಗ ನೀತಿಗೆ ಅನುಮೋದನೆಯನ್ನು ಸೌದಿ ಅರೇಬಿಯಾದ ಕಾನೂನು ಸಚಿವ ಅಲಿ ಬಿನ್ ನಸರ್ ಅಲ್ ಗಫೀಸ್ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ಪ್ರಸ್ತುತ ಸೌದಿ ಅರೇಬಿಯದಲ್ಲಿ 1.20 ಕೋಟಿ ವಿದೇಶಿ ಕಾರ್ಮಿಕರಿದ್ದು ಈ ಕಾರ್ಮಿಕರು ಅತ್ಯಂತ ಕಡಿಮೆ ವೇತನಕ್ಕೆ ಶ್ರಮದಾಯಕ ಮತ್ತು ಅಪಾಯಕಾರಿ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಸ್ವೀಟ್ ಶಾಪ್ಸ್, ಕಾರ್ ಮತ್ತು ಮೋಟಾರ್ ಬೈಕ್ ಶೋರೂಮ್, ಸಿದ್ಧ ಉಡುಪುಗಳ ಅಂಗಡಿ, ಗೃಹ ಮತ್ತು ಕಚೇರಿ ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು ಮತ್ತು ಅಡುಗೆ ಮನೆಯ ಸರಕುಗಳ ಅಂಗಡಿ ಮುಂತಾದ 12 ಕ್ಷೇತ್ರಗಳಲ್ಲಿ ವಿದೇಶಿಯರಿಗೆ ಉದ್ಯೋಗ ನೀಡದಿರಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.