ಬಂಟ್ವಾಳ,ಫೆ 06: ಪುದು ಗ್ರಾಮ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ 2 ಸೀಟುಗಳನ್ನು ಏರಿಕೆ ಮಾಡಲು ಮತದಾರರ ಪಟ್ಟಿಯನ್ನು ವಿಂಗಡಣೆ ಮಾಡುವಾಗ ಚುನಾವಣೆ ಇಲಾಖೆಯು ವಿನಾ ಕಾರಣ ಗೊಂದಲವನ್ನು ಸೃಷ್ಟಿಸಿದೆ ಎಂದು ಕಾಂಗ್ರೆಸ್ ಮತ್ತು ಎಸ್ ಡಿ ಪಿ ಐ ಪಕ್ಷಗಳು ಆರೋಪ ಪ್ರತ್ಯಾರೋಪಗಳ ಸುರಿಮಳೆ ಸುರಿಸಿದೆ . ಜೊತೆಗೆ ಎರಡು ಪಕ್ಷದ ಪ್ರಮುಖರು ಮಿನಿ ವಿಧಾನ ಸೌಧಕ್ಕೆ ರಾತ್ರೋ ರಾತ್ರಿಯೇ ಆಗಮಿಸಿ ಸಮಸ್ಯೆಯನ್ನು ಪರಿಹರಿಸಲು ಪಟ್ಟು ಹಿಡಿದು ಕುಳಿತು ಕೊಂಡಿದ್ದು , ಸರಿಪಡಿಸದಿದ್ದರೆ ಜಾಗ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಚುನಾವಣಾದಿಕಾರಿ ರಾಜೇಶ್ ಸ್ಥಳದಲ್ಲಿ ಮೊಕ್ಕಾಂ ಮಾಡಿ ಚುನಾವಣಾ ಶಾಖೆಯ ಅಧಿಕಾರಿಗಳ ಜೊತೆ ಸಮಸ್ಯೆ ಸರಿಪಡಿಸುತ್ತಿದ್ದಾರೆ. ವಾರ್ಡ್ ನಂ 6 ರ ಭಾಗಶಃ ಮತಗಳನ್ನು ವಾರ್ಡ್ ನಂ 10 ಕ್ಕೆ ಬರುವಂತೆ ಹಾಗೂ ವಾರ್ಡ್ ನಂ 1ರ ಭಾಗಶಃ ಮತಗಳನ್ನು ವಾರ್ಡ್ ನಂ 4 ಕ್ಕೆ ಬರುವಂತೆ ಮಾಡಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಲು ಮತದಾರರ ಪಟ್ಟಿಯನ್ನು ವಿಂಗಡಿಸಲಾಗಿದೆ. ಹಾಗೂ 600 ಮತಗಳಿರುವ ವಾರ್ಡ್ ನಲ್ಲಿ 4 ಸೀಟು 1000 ಮತಗಳಿರುವ ವಾರ್ಡ್ ನಲ್ಲಿ 2 ಸೀಟು ಗಳನ್ನು ಮೀಸಲಿಡುವ ಚುನಾವಣಾ ಅಧಿನಿಯಮಗಳನ್ನು ಗಾಳಿಗೆ ತೂರಲಾಗಿರುತ್ತದೆ. ಮೀಸಲಾತಿ ಪಟ್ಟಿಯಲ್ಲಿ ಕೂಡಾ ಗೊಂದಲಗಳು ಉಂಟಾಗಿವೆ ಎಂದು ಎಸ್ ಡಿ ಐ ಆರೋಪಿಸಿದೆ. ಮತದಾರರ ಪಟ್ಟಿಯಲ್ಲಿ ಗೊಂದಲವಿರುವ ಬಗ್ಗೆ ಕಂಡು ಹಿಡಿದ ಪುದು ವಲಯ ಕಾಂಗ್ರೆಸ್ ನ ಫಾರೂಕ್ ನೇತೃತ್ವದ ನಿಯೋಗವು ತಾಹ್ಸಿಲ್ದಾರರೊಂದಿಗೆ ಮಾತುಕತೆ ನಡೆಸಿ ಮತದಾರ ಪಟ್ಟಿ ಸರಿಪಡಿಸಿ ಚುನಾವಣೆ ನಡೆಸಬೇಕೆಂದು ಮನವಿ ಮಾಡಿದೆ, ಇಲ್ಲದಿದ್ದಲ್ಲಿ ಕಾನೂನು ಹೋರಾಟ ನಡೆಸುತ್ತೇವೆ. ಇದರಲ್ಲಿ ಎಸ್ ಡಿ ಪಿ ಐ ನಾಯಕರು ರಾಜಕೀಯ ಬೇಳೆ ಬೇಯಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಅವರಿಗೆ ಫಿತೂರಿ ಮಾಡುವುದೇ ಕೆಲಸ ಎಂದು ಕಾಂಗ್ರೆಸ್ ಆರೋಪಿಸಿದೆ.