ಮಂಗಳೂರು, ಸೆ17: ಎನ್ಐಟಿಕೆ ಟೋಲ್ ಕೇಂದ್ರವನ್ನು ರದ್ದುಗೊಳಿಸಲು ಆಗ್ರಹಿಸಿ, ಸರ್ವಿಸ್ ರಸ್ತೆಗಳ ನಿರ್ಲಕ್ಷ್ಯವನ್ನು ವಿರೋಧಿಸಿ ಮತ್ತು ಹೆದ್ದಾರಿ ಗುಂಡಿಗಳನ್ನು ಮುಚ್ಚಲು ಒತ್ತಾಯಿಸಿ ಸೆ.21 ರಂದು ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಸುರತ್ಕಲ್ ಟೋಲ್ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಯಲಿದೆ.
ಸುರತ್ಕಲ್ ಎನ್ಐಟಿಕೆ ಹಾಗೂ ಹೆಜಮಾಡಿ ಟೋಲ್ ಕೇಂದ್ರ ಹೆದ್ದಾರಿ ನಿಯಮಗಳಿಗೆ ವಿರುದ್ಧವಾಗಿ 10 ಕಿ.ಮೀ ಅಂತರದಲ್ಲಿ ಎರಡು ಕಡೆ ಅಕ್ರಮವಾಗಿ ಸುಂಕ ಸಂಗ್ರಹಿಸುತ್ತಿದ್ದಾರೆ. ಟೋಲ್ ಗೆ ಪರ್ಯಾಯವಾಗಿರುವ ರಸ್ತೆಗಳನ್ನು ಬಲವಂತವಾಗಿ ಮುಚ್ಚುವ ಪ್ರಯತ್ನವನ್ನು ಟೋಲ್ ಗುತ್ತಿಗೆದಾರರು ಮಾಡುತ್ತಿದ್ದು, ಇದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕೂಳೂರು, ಪಣಂಬೂರು, ಬೈಕಂಪಾಡಿ, ಸುರತ್ಕಲ್ ಭಾಗದ ಹೆದ್ದಾರಿ ಹೊಂಡ ಗುಂಡಿಗಳಿಂದ ತುಂಬಿಹೋಗಿದೆ. ಆದರೆ, ಟೋಲ್ ಕೇಂದ್ರ ದುಬಾರಿ ಸುಂಕ ಪಡೆಯುತ್ತಿದೆ. ಸರಿಯಾದ ನಿರ್ವಹಣೆ ಇಲ್ಲದೆ ಭಾರೀ ಗಾತ್ರದ ಗುಂಡಿಗಳು ಅಪಘಾತಗಳಿಗೆ ಕಾರಣವಾಗುತ್ತಿದ್ದು, ರಸ್ತೆಗಳಿಂದ ಪ್ರಾಣಕ್ಕೆಅಪಾಯವೂ ಇದೆ. ಸುಂಕವನ್ನು ವಸೂಲಿ ಮಾಡುವ ಹೆದ್ದಾರಿ ಪ್ರಾಧಿಕಾರ ದುರಸ್ಥಿಯ ಕುರಿತು ದಿವ್ಯ ನಿರ್ಲಕ್ಷ್ಯ ತಾಳಿದೆ.
ಕೇಂದ್ರ ಹೆದ್ದಾರಿ ನಿಯಮಗಳಿಗೆ ವಿರುದ್ಧವಾಗಿ ಅಕ್ರಮ ಸುಂಕ ಸಂಗ್ರಹಿಸುತ್ತಿರುವ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚಬೇಕು ಜೊತೆಗೆ ಹೆದ್ದಾರಿ ಗುಂಡಿಗಳನ್ನು ಮುಚ್ಚಿ ಕೂಡಲೇ ದುರಸ್ಥಿಗೆ ಮುಂದಾಗಬೇಕು ಎಂದು ಆಗ್ರಹಿಸಿ ಜನಪರ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 21ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಸುರತ್ಕಲ್ ಟೋಲ್ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಜನಹಿತ ಬಯಸುವ ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಲಿವೆ ಎಂದು ತಿಳಿಸಿದ್ದಾರೆ.