ಮಂಗಳೂರು ಫೆ 06 : ಕೊಟ್ಟಾರ ಚೌಕಿ ಬಳಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ಬಷೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡಿದ್ದ ಬಂಟ್ವಾಳ ನಿರ್ಕಜೆಯ ಬಡಕೋಡಿ ನಿವಾಸಿ ಅಭಿಷೇಕ್ (21) ಬಂಧಿತ ಆರೋಪಿ. ಪುತ್ತೂರಿನ ಬನ್ನೂರು ಸಮೀಪ ತಲೆಮರೆಸಿಕೊಂಡಿದ್ದ ಈತನನ್ನು ಕಾವೂರು ಠಾಣಾ ಪೊಲೀಸರ ತಂಡ ದಸ್ತಗಿರಿ ನಡೆಸಿದೆ. ಇನ್ನು ಜನವರಿ 3 ರಂದು ಫಾಸ್ಟ್ ಫುಡ್ ಅಂಗಡಿ ಮುಚ್ಚಿ ಮನೆಗೆ ಹೊರಡುತ್ತಿದ್ದ ಬಶೀರ್ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ರು. ಜನವರಿ 7 ರಂದು ಬಷೀರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಇದೀಗ ಬಂಧಿತರ ಸಂಖ್ಯೆ 7ಕ್ಕೇರಿದೆ.