ಕಾಸರಗೋಡು ಫೆ 05 : ಕುಂಬಳೆ ಠಾಣಾ ವ್ಯಾಪ್ತಿಯ ಬಂದ್ಯೋಡ್ ಅಡ್ಕ ದಲ್ಲಿ ಅಂಗಡಿ ಶಟರ್ ಮುರಿದು ನಗದು ಹಾಗೂ ಮೊಬೈಲ್ ಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವು ಪ್ರಕರಣಗಳ ಆರೋಪಿ ಸೇರಿದಂತೆ ಮಂಗಳೂರಿನ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಂಕನಾಡಿ ಪಕ್ಕಲಡ್ಕದ ಅಜಾಜ್( 22) ಮತ್ತು ಉಳ್ಳಾಲ ಚೆಂಬುಗುಡ್ಡೆಯ ಹಿದಾಯತ್(23) ಎಂದು ಗುರುತಿಸಲಾಗಿದೆ. ಜನವರಿ 30 ರಂದು ಬಂದ್ಯೋಡು ಅಡ್ಕದ ಮುಹಮ್ಮದ್ ರಫೀಕ್ ಎಂಬವರ ಅಂಗಡಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ನಾಲ್ಕು ಸಾವಿರ ರೂ . ನಗದು , ಮೂರು ಮೊಬೈಲ್ ಫೋನ್ ಹಾಗೂ 50 ಪ್ಯಾಕೆಟ್ ಸಿಗರೇಟ್ ಗಳನ್ನು ಕಳವು ಮಾಡಿದ್ದರು. ಕಳವು ಗೈದ ಒಂದು ಮೊಬೈಲನ್ನು ಆರೋಪಿಗಳು ಮಾರಾಟ ಮಾಡಿದ್ದು , ಎರಡನ್ನು ಬೇರೆ ಸಿಮ್ ಹಾಕಿ ಬಳಸುತ್ತಿದ್ದರು.
ಸೈಬರ್ ಸೆಲ್ ನ ನೆರವಿನಿಂದ ತನಿಖೆ ನಡೆಸಿದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಕುಂಬಳೆ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಇವರ ವಿರುದ್ಧ ಮಂಗಳೂರು , ಉಳ್ಳಾಲ ಸೇರಿದಂತೆ ಹಲವು ಪೊಲೀಸ್ ಠಾಣೆ ಗಳಲ್ಲಿ 20 ಕ್ಕೂ ಅಧಿಕ ಮೊಕದ್ದಮೆ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಗಾಂಜಾ ಮತ್ತು ಕಳವು ಪ್ರಕರಣಗಳಲ್ಲಿ ಆರೋಪಿ ಗಳಾಗಿದ್ದು , ವಾಹನ ಕಳವು , ಗಾಂಜಾ ಮಾರಾಟ , ಜಾನುವಾರು ಕಳವು ಸೇರಿದಂತೆ 11 ಪ್ರಕರಣಗಳು ಹಿದಾಯತ್ ವಿರುದ್ಧ ದಾಖಲಾಗಿದ್ದರೆ, ಅಜಾಜ್ ವಿರುದ್ಧ ಒಂಭತ್ತು ಪ್ರಕರಣಗಳಿವೆ. ಜನವರಿ 30 ರಂದು ರಾತ್ರಿ ಗಾಂಜಾ ಮಾರಾಟಕ್ಕೆ ಉಪ್ಪಳಕ್ಕೆ ತಲಪಿದ್ದ ಇವರು ಮಧ್ಯರಾತ್ರಿ ಸಿಗರೇಟ್ ಗಾಗಿ ಅಲೆದಾಡಿದ್ದು , ಎಲ್ಲಾ ಅಂಗಡಿಗಳು ಮುಚ್ಚಿದ್ದರಿಂದ ಬಂದ್ಯೋಡಿ ಗೆ ತಲುಪಿ ಅಂಗಡಿಯ ಶಟರ್ ಮುರಿದು ಕಳವು ಮಾಡಿದ್ದಾರೆ . ಆರೋಪಿಗಳನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು , ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲು ಅರ್ಜಿ ಸಲ್ಲಿಸಲಾಗುವುದು ಎಂದು ಕುಂಬಳೆ ಪೊಲೀಸರು ತಿಳಿಸಿದ್ದಾರೆ.