ಬಂಟ್ವಾಳ, ಸೆ17: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಿ.ಸಿ.ರೋಡಿನ ಸರ್ವಿಸ್ ರಸ್ತೆಯಲ್ಲಿ ಕೃತಕ ನೆರೆ ಉಂಟಾಗಿದೆ. ರಸ್ತೆಯ ಎಲ್ಲೆಡೆ ನೀರು ತುಂಬಿ ಕೃತಕ ನೆರೆ ಹಾವಳಿ ಉಂಟಾಗಿರುವುದರಿಂದ ವಾಹನಗಳು ಸಂಚರಿಸಲಾಗದ, ಪಾದಚಾರಿಗಳು ನಡೆದಾಡಲಾಗದ ಅಸಹನೀಯ ವಾತಾವರಣ ನಿರ್ಮಾಣವಾಗಿದೆ. ರಸ್ತೆ ಸಂಪೂರ್ಣ ಹೊಂಡಮಯವಾಗಿರುವುದೇ, ಕೃತಕ ನೆರೆ ಸೃಷ್ಟಿಯಾಗಲು ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಬಿಸಿರೋಡಿನ ಸರ್ವಿಸ್ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿ ಜನ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿರುವ ಈ ಸಮಸ್ಯೆಯ ಮುಕ್ತಿಗಾಗಿ ಜನ ಅಸಾಯಕತೆಯಿಂದ ಕಾದು ಕುಳಿತಿದ್ದಾರೆ. ಮಳೆಗಾಲದಲ್ಲಿ ಸರ್ವಿಸ್ ರಸ್ತೆಯ ಚರಂಡಿ ಕಾಮಗಾರಿ ಆರಂಭ ಮಾಡಲಾಗಿದ್ದು, ಈ ಕಾಮಗಾರಿ ಅಸಮರ್ಪಕವಾಗಿ ನಡೆಸಲಾಗಿದೆ ಅನ್ನುವ ಆರೋಪ ವ್ಯಕ್ತವಾಗಿತ್ತು. ಇನ್ನೊಂದು ಕಡೆ ಸರ್ವಿಸ್ ರಸ್ತೆಯ ಕಾಮಗಾರಿ ಕೂಡ ನಡೆಸಲಾಗುತ್ತಿದ್ದು, ಮಳೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲದೇ ನೀರು ಅಂಗಡಿಗಳಿಗೆ ನುಗ್ಗುತ್ತಿವೆ. ಇದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡು ಸಮಸ್ಯೆ ಪರಿಹಾರವಾಗಲಿ ಅನ್ನುವ ಆಗ್ರಹ ಕೇಳಿಬಂದಿದೆ.