ಬೆಂಗಳೂರು, ಫೆ 05: ಇಂದಿನಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗಲಿದೆ. ಈ ವರ್ಷದ ಮೊದಲ ಅಧಿವೇಶನ ಇದಾಗಿದ್ದು ಇದೇ ಫೆಬ್ರವರಿ 9 ರವರೆಗೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ವಜೂಬಾಯಿ ವಾಲಾ ವಿಧಾನ ಮಂಡಲದ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರ ಇರುವುದರಿಂದ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಈ ಅಧಿವೇಶನ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ರೆಡಿಯಾಗುತ್ತಿವೆ. ಅತ್ತಕಡೆ ಆಡಳಿತ ಪಕ್ಷವೂ ತಿರುಗೇಟು ನೀಡಲು ಸಿದ್ಧವಾಗುತ್ತಿದೆ.ಕಾನೂನು ಸುವ್ಯವಸ್ಥೆಯಲ್ಲಿ ಸರ್ಕಾರದ ವೈಫಲ್ಯತೆ, ರಾಜ್ಯಾದ್ಯಂತ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಪ್ರಮುಖ ಪ್ರತಿಪಕ್ಷ ಬಿಜೆಪಿ ಸಜ್ಜಾಗಿದ್ದಾರೆ, ಸರ್ಕಾರದ ಒಟ್ಟಾರೆ ಆಡಳಿತ ವೈಫಲ್ಯ ಮುಂದಿಟ್ಟುಕೊಂಡು. ಪ್ರತಿಪಕ್ಷ ಜೆಡಿಎಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. ಇನ್ನೊಂದೆಡೆ ಸರ್ಕಾರ ಪ್ರಸ್ತುತ ಜಾರಿಗೆ ತಂದಿರುವ ಜನಪರ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತಾರೂಢ ಕಾಂಗ್ರೆಸ್ ಕೂಡ ಸಿದ್ಧತೆ ನಡೆಸುತ್ತಿದೆ.
ವಿಧಾನಮಂಡಲ ಅಧಿವೇಶನದಲ್ಲಿ ಸರಕಾರ ತರಾತುರಿಯಲ್ಲಿ ಮಸೂದೆಗಳನ್ನು ಮಂಡಿಸಿ ಅನುಮೋದನೆಗೆ ಮುಂದಾದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಈಗಾಗಲೇ ವಿಧಾನಸಭಾಧ್ಯಕ್ಷ ಕೆ.ಬಿ ಕೋಳಿವಾಡ ಹೇಳಿದ್ದಾರೆ. ಇನ್ನು ಇದೇ 16 ರಂದು ಮಧ್ಯಾಹ್ನ 12.30ಕ್ಕೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ.