ಸುಳ್ಯ, ಫೆ 04: ಕೊಡಗು ಜಿಲ್ಲೆಯ ಸಂಪಾಜೆ ಗ್ರಾಮದ ಕಡಮಕಲ್ಲು ಮೀಸಲು ಅರಣ್ಯ ಪ್ರದೇಶದ ಗುಡ್ಡೆಗದ್ದೆಯಲ್ಲಿ ಮೂವರು ಶಂಕಿತ ನಕ್ಸಲರು ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾನುವಾರವೂ ಶೋಧ ಕಾರ್ಯ ಮುಂದುವರೆದಿದೆ. ನಕ್ಸಲ್ ನಿಗ್ರಹ ದಳದ ಎರಡು ತಂಡಗಳು ಕೊಡಗು ಜಿಲ್ಲಾ ಪೊಲೀಸರ ಸಹಕಾರದಿಂದ ಕಾರ್ಯಾಚರಣೆ ನಡೆಸಿವೆ. ಆದ್ರೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಇನ್ನು ಸಂಪಾಜೆ ಸುಳ್ಯ, ಸುಬ್ರಹ್ಮಣ್ಯ ಭಾಗದಲ್ಲೂ ಕಟ್ಟೆಚ್ಚರ ಮುಂದುವರೆಸಲಾಗಿದ್ದು, ವ್ಯಕ್ತಿಗಳ ಓಡಾಟದ ಬಗ್ಗೆ ನಿಗಾ ವಹಿಸಲಾಗಿದೆ.
ರಾಜ್ಯ ಹಾಗೂ ಹೊರ ರಾಜ್ಯದ ನಾನಾ ಭಾಗಗಳಲ್ಲಿ ನಕ್ಸಲ್ ನಿಗ್ರಹ ಚಟುವಟಿಕೆ ತೀವ್ರಗೊಂಡಿರುವ ಪರಿಣಾಮ ಭೀತರಾಗಿರುವ ನಕ್ಸಲರು ನಿಂತಲ್ಲಿ ನಿಲ್ಲದೆ ಅಲೆದಾಡುವ ಸ್ಥಿತಿ ಹಾಗೂ ಆಹಾರ ಕೊರತೆ ತೀವ್ರವಾಗಿ ಕಾಡುತ್ತಿದೆ ಎನ್ನಲಾಗಿದೆ. ಇದಕ್ಕಾಗಿ ಪೊಲೀಸರಿಗೆ ಶೀಘ್ರವಾಗಿ ತಲುಪಲಾಗದ ಊರು ಹಾಗೂ ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಪ್ರದೇಶ ಭಾಗಗಳ ಮನೆಗಳಿಗೆ ತೆರಳಿ ನಕ್ಸಲರು ಆಹಾರ ಸಾಮಾಗ್ರಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ . ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಿಂಗಳ ಅಂತರದಲ್ಲಿ ಎರಡನೇ ಬಾರಿ ನಕ್ಸಲರು ಕಾಣಿಸಿಕೊಂಡಿರುವುದರಿಂದ ಜನರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.