ಬೆಂಗಳೂರು ಫೆ 04: ಪರಿವರ್ತನಾ ಯಾತ್ರೆಯ ಸಮರೋಪ ಸಮಾರಂಭದಲ್ಲಿ ಭಾಗಿಯಾಗಲು ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯ ಆರಂಭಕ್ಕೆ ಚಾಲನೆ ನೀಡಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ನನ್ನ ಪ್ರೀತಿಯ ಬಂಧು ಭಗಿನಿಯರೆ ನಿಮಗೆಲ್ಲಾ ನನ್ನ ನಮಸ್ಕಾರಗಳು. ನಾಡಪ್ರಭು ಕೆಂಪೇಗೌಡ , ಮಹಾತ್ಮ ಬಸವೇಶ್ವರ , ಶರಣ ಮಾದಾರ ಚೆನ್ನಯ್ಯ, ವೀರ ರಾಣಿ ಕಿತ್ತೂರು ಚೆನ್ನಮ್ಮ, ಸಂಗೋಳ್ಳಿ ರಾಯಣ್ಣ, ಸರ್.ಎಂ.ವಿಶ್ವೇಶ್ವರಯ್ಯ ಅವರ ಮಹಾನ್ ನಾಡು ಕರ್ನಾಟಕ. ನವ ಕರ್ನಾಟಕ ನಿರ್ಮಾಣದಲ್ಲಿ ಪರಿವರ್ತನೆ ಮಾಡಿ ಬಿಜೆಪಿ ಗೆಲ್ಲಿಸಿ' ಎಂದು ಕನ್ನಡದಲ್ಲೇ ಮಾತನಾಡಿದರು.ಮೋದಿ ಮಾತನಾಡಿದ ಕನ್ನಡ ಕೇಳಿ ಅಲ್ಲಿ ಸೇರಿದ್ದ ಸಾವಿರಾರು ಕಾರ್ಯಕರ್ತರನ್ನು ಪುಳಕಿತರಾಗುವಂತೆ ಮಾಡಿತು.
ಸಾಂದರ್ಭಿಕ ಚಿತ್ರ
ನೆರೆದಿದ್ದ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಾಲ್ಕು ಬದಿಯಲ್ಲೂ ತುಂಬಿ ತುಳುಕುತ್ತಿರುವ ಜನರನ್ನು ನೋಡಿದಾಗಲೇ ಗೊತ್ತಾಗುತ್ತದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ ಎನ್ನುತ್ತಾ ರಾಜ್ಯ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರದ ಕಹಳೆ ಊದಿದರು. ಸರ್ವರ ಸಹಕಾರ ಸರ್ವರ ವಿಕಾಸ ನಮ್ಮ ನಡೆ. ಕೇಂದ್ರ ಸರ್ಕಾರ ಕಳೆದ 3.5 ವರ್ಷಗಳಲ್ಲಿ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ನಿಮಗೆ ತಲುಪಿಸಿಲ್ಲ .ಅನುದಾನ ಬಳಕೆಯಾಗಿರುವ ಬಗ್ಗೆ ಯಾವುದಾದರೂ ಸಾಕ್ಷ್ಯ ಇದೆಯಾ ಎಂದರು. ಮೊದಲ ಸರ್ಕಾರಗಳು ದೇಶದ ರೈತರಿಗೆ ಯೂರಿಯಕ್ಕಾಗಿ ಲಾಠಿ ಏಟು ತಿನ್ನಬೇಕಾಗಿತ್ತು, ಪರದಾಡಬೇಕಾಗಿತ್ತು. ನಮ್ಮ ಸರ್ಕಾರ ರೈತರನ್ನು ಸಂಕಷ್ಟದಿಂದ ದೂರ ಮಾಡಲು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನಾ ಆರಂಭಿಸಿದೆವು. ಪ್ರಧಾನ್ ಮಂತ್ರಿ ಸಿಂಚಾಯಿ ಯೋಜನೆ ತಂದೆವು. ರೈತರ ಅಭಿವೃದ್ಧಿಗಾಗಿ 1 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದರು.