ಮಂಗಳೂರು, ಫೆ 04: ನಾಲ್ಕು ದಶಕಗಳಿಂದ ರೈಲ್ವೇ ಇಲಾಖೆಯ ತಾಂತ್ರಿಕ ಕಾರಣಗಳಿಂದ ಅಭಿವೃದ್ದಿ ಕಾಣದೆ ಉಳಿದಿದ್ದ ಕುಲಶೇಖರ- ಕಣ್ಣಗುಡ್ಡೆ ರಸ್ತೆಯ, ಡಾಮರು ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರವನ್ನು ಫೆ. 4ರ ಭಾನುವಾರ ಶಾಸಕ ಜೆ.ಆರ್ ಲೋಬೋ , ಹಾಗೂ ಮೇಯರ್ ಕವಿತಾ ಸನಿಲ್ ನೆರವೇರಿಸಿದರು. ಬಳಿಕ ಮಾತನಾಡಿದ ಶಾಸಕ ಜೆ. ಆರ್ ಲೋಬೋ , ಸುಮಾರು 40 ವರ್ಷಗಳಿಂದ ಈ ಭಾಗದ 2 ಸಾವಿರಕ್ಕೂ ಹೆಚ್ಚು ಜನರು ಸಮರ್ಪಕ ರಸ್ತೆಯಿಲ್ಲದೆ, ತೊಂದರೆ ಅನುಭವಿಸುತ್ತಿದ್ದರು. 2 ವರ್ಷಗಳ ಹಿಂದೆಯೇ ಈ ರಸ್ತೆಗೆ ಸುಮಾರು ರಾಜ್ಯ ಸರ್ಕಾರ ಸುಮಾರು 85 ಲಕ್ಷ ರೂ ಮೊತ್ತದ ಅನುದಾನ ಮಂಜೂರು ಮಾಡಿತ್ತು . ಆದರೆ ರೈಲ್ವೇ ಇಲಾಖೆಯ ತಾಂತ್ರಿಕ ಕಾರಣ ಕಾಮಗಾರಿಗೆ ಅಡ್ಡಿಯಾಗಿತ್ತು. ರಸ್ತೆ ಸಂಪರ್ಕ ಸರಿಯಿಲ್ಲದೆ ಈ ಪ್ರದೇಶ ದ್ವೀಪದಂತಾಗಿತ್ತು. ಇದೀಗ ರೈಲ್ವೇ ಬೋರ್ಡ್ ಗೆ ಸುಮಾರು 1.32 ಕೋಟಿ ರೂ ಠೇವಣಿ ರೂಪದಲ್ಲಿ ಪಾವತಿಸಿ ಒಪ್ಪಿಗೆ ಪಡೆದಿದ್ದೇವೆ. ವಿಶೇಷ ಅನುದಾನ 10 ಕೋಟಿ ರೂ ಗಳ ರಸ್ತೆ ಕಾಮಗಾರಿ ನಡೆಯಲಿದ್ದು ಆರಂಭದ ಹಂತದಲ್ಲಿ ಒಂದು ಕಿ.ಮೀ ರಸ್ತೆಯ ಕಾಮಗಾರಿ ಪ್ರಾರಂಭವಾಗಲಿದೆ . ಇದರಿಂದಾಗಿ ಹಲವು ವರ್ಷಗಳಿಂದ ಸ್ಥಳೀಯರು ಅನುಭವಿಸುತ್ತಿದ್ದ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಂತಾಗಿದೆ ಎಂದರು.
ಬಳಿಕ ಮಾತನಾಡಿದ ಮೇಯರ್ ಕವಿತಾ ಸನಿಲ್ , ಜೆ. ಆರ್ ಲೋಬೋ ಒಬ್ಬ ಅತ್ಯುತ್ತಮ ಶಾಸಕ, ಇವರು ಕುಲಶೇಖರ , ಕಣ್ಣಗುಡ್ಡೆ ಜನರ 40 ವರ್ಷಗಳ ಕನಸನ್ನು ನನಸು ಮಾಡಿದ್ದಾರೆ.. ಶಾಸಕರು ರೈಲ್ವೇ ಇಲಾಖೆಯೊಂದಿಗೆ ಜಾಣ್ಮೆಯಿಂದ ವರ್ತಿಸಿ ನಲುವತ್ತು ವರ್ಷಗಳಿಂದ ಪರಿಹಾರ ಕಾಣದ ಸಮಸ್ಯೆಗೆ ಕೇವಲ 4 ವರ್ಷಗಳಲ್ಲಿ ಪರಿಹಾರ ಒದಗಿಸಿಕೊಟ್ಟಿದ್ದಾರೆ ಎಂದರು.
ಆರಂಭದಲ್ಲಿ 70 ಲಕ್ಷ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು , ಬಳಿಕ 10 ಕೋಟಿ ರೂಪಾಯಿಗಳಲ್ಲಿ 4 ಕಿ. ಮೀ ರಸ್ತೆ ಅಭಿವೃದ್ದಿಗೊಳ್ಳಲಿದೆ. ಈ ಕಾಮಗಾರಿಯಿಂದ ಸ್ಥಳೀಯರಿಗೆ ಗಗನ ಕುಸುಮವಾಗಿದ್ದ ರಸ್ತೆಯ ಕನಸು ನೇರವೇರಿದಂತಾಗಿದೆ. ರಸ್ತೆ ಅಭಿವೃದ್ದಿಯಿಂದಾಗಿ ಕಣ್ಣ ಗುಡ್ಡ, ಉಮೀಕಾ ಮೈದಾನ, ಮೇಲ್ತೋಟ್ಟು, ಸೂರ್ಯನಗರ , ನೂಜಿ , ಸರಿಪಳ್ಳ ಪುಳಿರೇ, ಕಲಾಯಿ , ಪ್ರಾದ್ ಸಾಬ್ ಕಾಲನಿ. ಕರ್ಫಿಮಾರ್ , ದೆಕ್ಕಾಡಿ ಮೊದಲಾದ ಪ್ರದೇಶದ ಜನತೆಗೆ ಪ್ರಯೋಜನವಾಗಲಿದೆ.