ಬಂಟ್ವಾಳ ಫೆ 04: ಬಂಟ್ವಾಳ ತಾಲೂಕಿನ ಮುಲಾರಪಟ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಸಹಿತ 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಮುಲಾರ ಪಟ್ನ ಪಲ್ಗುಣಿ ನದಿ ತಟದಲ್ಲಿ ಹಲವಾರು ಸಮಯಗಳಿಂದ ಯಾಂತ್ರೀಕೃತ ದೋಣಿಗಳನ್ನು ಬಳಸಿ ಅಕ್ರಮವಾಗಿ ಮರಳು ತೆಗೆಯಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಎಸ್ಪಿ ರವಿಕಾಂತೇ ಗೌಡ ಹಾಗೂ ಅಡಿಷನಲ್ ಎಸ್ಪಿ ಸಜೀತ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ನಾಗರಾಜ್ ಮತ್ತು ಬಂಟ್ವಾಳ ಗ್ರಾಮಾಂತರ ಉಪನಿರೀಕ್ಷಕ ಪ್ರಸನ್ನ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ 8 ಮಂದಿ ಆರೋಪಿಗಳ ಸಹಿತ 4 ಲಾರಿ, 10 ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಸುಮಾರು 15 ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡಿದ್ದಾರೆ.