ಬಂಟ್ವಾಳ, ಸೆ17: ಬಂಟ್ವಾಳದ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ 2016-17 ರಲ್ಲಿ, ಸುಮಾರು 44.91 ಲಕ್ಷ ರೂ ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಜಿ. ಆನಂದ ತಿಳಿಸಿದ್ದಾರೆ.
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಾಭಾಂಶದಲ್ಲಿ ಸದಸ್ಯರಿಗೆ ಶೇ.8 ರಷ್ಟು ಡಿವಿಡೆಂಡ್ ನ್ನು ಪ್ರಕಟಿಸಿದರು. 2016-17 ನೇ ಸಾಲಿನಲ್ಲಿ ಪಡಿತರ ವ್ಯವಹಾರದಲ್ಲೂ ವ್ಯವಸಾಯ ಸೇವಾ ಸಹಕಾರಿ ಸಂಘವು 68,772 ರೂ. ಲಾಭವನ್ನು ಹೊಂದಿದ್ದು, ಲೆಕ್ಕ ಪತ್ರ ಪರಿಶೋಧನೆಯಲ್ಲಿಯೂ ಸಂಘ ' ಎ' ವರ್ಗೀಕರಣವನ್ನು ಪಡೆದಿದೆ ಎಂದು ಹರ್ಷ ವ್ಯಕ್ತಪಡಿಸಿರು.
ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘವು ಒಟ್ಟು 23.10 ಕೋಟಿ ರೂ. ಠೇವಣಿಯನ್ನು ಹೊಂದಿದ್ದು 2016-17 ನೇ ಸಾಲಿನಲ್ಲಿ 18.79 ಕೋಟಿ ರೂ. ಸಾಲವನ್ನುಜನರಿಗೆ ನೀಡಿದೆ. ಇದರಲ್ಲಿ 19.59 ಕೋಟಿ ರೂ. ಸಾಲ ವಸೂಲಾತಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಶೇ. 100 ರಷ್ಟು ಸಾಲ ವಸೂಲಾತಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಿ.ಸಿ.ರೋಡಿನಲ್ಲಿ ನಿರ್ಮಾಣ ಹಂತದಲ್ಲಿರುವ ಸಂಘದ ನೂತನ ಕಟ್ಟಡದ ಕಾಮಗಾರಿಯನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ನೆಲ ಅಂತಸ್ತನ್ನು ವಾಣಿಜ್ಯ ಉದ್ದೇಶಗಳಿಗೆ ನೀಡಿ ಸಂಘದ ಆದಾಯ ಹೆಚ್ಚಿಸಲು ನಿರ್ಧರಿಸಲಾಗಿದ. ಭವಿಷ್ಯದಲ್ಲಿ ಗೃಹ, ವಾಹನ ಸಾಲದ ಜತೆಗೆ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಇದೇ ಸಂದರ್ಭ ತಿಳಿಸಿದರು.
ಸರಕಾರ ಘೋಷಿಸಿರುವ ಸಾಲ ಮನ್ನಾಕ್ಕೆ ಸಂಬಂಧಿಸಿ ಅನುದಾನ ಇನ್ನೂ ಕೂಡ ಬರಲಿಲ್ಲ ಎನ್ನುವ ಸದಸ್ಯರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಸಂಘದಲ್ಲಿಯೂ 27 ಮಂದಿ ಸದಸ್ಯರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಸೌಲಭ್ಯ ಎಲ್ಲರಿಗೂ ದೊರಕಬೇಕು ಎನ್ನುವುದು ನಮ್ಮ ಸಂಘದ ಉದ್ದೇಶ. ಈ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ನಮ್ಮ ಮೇಲೆ ಒತ್ತಡ ಹೇರಲಾಗಿದ್ದು, ಸೌಲಭ್ಯ ಮುಂದಿನ ದಿನಗಳಲ್ಲಿ ಸಿಗುವ ನಿರೀಕ್ಷ ಇದೆ ಎಂದರು.
ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಎಂ. ಕರುಣೇಂದ್ರ ಪೂಜಾರಿ, ಮನೋಹರ ಮೂಲ್ಯ, ಕೆ. ಎನ್. ಶೇಖರ್, ಕೆ. ಪ್ರಕಾಶ್, ಬಿ. ಸದಾಶಿವ ಶೆಣೈ, ವಿದ್ಯಾವತಿ ಪ್ರಮೋದ್ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಜಯಪ್ರಕಾಶ್ ಕಾಮತ್ ಸ್ವಾಗತಿಸಿದರು. ಉಪಾಧ್ಯಕ್ಷ ಮಹಾಬಲ ಶೆಟ್ಟಿ ವಂದಿಸಿದರು.