ಬೆಂಗಳೂರು ಫೆ 04 : ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲು ಹಾಗೂ ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯ ಆರಂಭಕ್ಕೆ ಚಾಲನೆ ನೀಡಲು ನರೇಂದ್ರ ಮೋದಿ ಇಂದು ನಗರಕ್ಕೆ ಆಗಮಿಸುತ್ತಿದ್ದಾರೆ. ಇಂದು ಸುಮಾರು 3.30ಕ್ಕೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. 3.55ಕ್ಕೆ ಹೆಲಿಕಾಪ್ಟರ್ ಮೂಲಕ ಅರಮನೆ ಮೈದಾನ ಪ್ರವೇಶಿಸಲಿದ್ದು, 4ಕ್ಕೆ ಸಮಾರಂಭದ ವೇದಿಕೆಗೆ ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಭಾಷಣ ಮಾಡಿ 5.35ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣ ತಲುಪಲಿದ್ದು, ಅಲ್ಲಿಂದ ಮತ್ತೆ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಬೆಂಗಳೂರು ಸಹಿತ 30 ಜಿಲ್ಲೆಗಳ ಸುಮಾರು 4 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಈ ಸಮಾರಂಭಕ್ಕೆ ಕರೆತರಲು ಬಿಜೆಪಿ ನಾಯಕರು ಕಂಕಣ ತೊಟ್ಟಿದ್ದಾರೆ. ಈ ಮೂಲಕ ಪ್ರಧಾನಿಯವರ ಮುಂದೆ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ನಗರಕ್ಕೆ ವಿವಿದೆಡೆಯಿಂದ ಭಾರೀ ಜನಸ್ತೋಮ ಹರಿದು ಬರಲು ಪ್ರಾರಂಭವಾಗಿದೆ
ಪೊಲೀಸ್ ಬಂದೋಬಸ್ತ್ ಗಾಗಿ11 ಡಿಜಿಪಿ, 33 ಎಸಿಪಿ, 3 ಸಾವಿರ ಸಿವಿಲ್ ಪೊಲೀಸರ ನಿಯೋಜನೆ ಮಾಡಲಾಗಿದೆ. ಅಲ್ಲದೇ 50 ಕೆಎಸ್ಆರ್ಪಿ, 20 ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಸಂಚಾರ ನಿಯಂತ್ರಣಕ್ಕೆ 2 ಡಿಸಿಪಿ, 3 ಎಸಿಪಿ, 1200 ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನೊಂದೆಡೆ ಸರಿಸುಮಾರು 10 ಸಾವಿರ ಮಂದಿಯನ್ನು ಸೇರಿಸಿ ಸ್ವತಂತ್ರ ಉದ್ಯಾನದಲ್ಲಿ ರೈತರ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಅದಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹದಾಯಿ ಬಗ್ಗೆ ನಿರ್ಧಾರ ಪ್ರಕಟಿಸುವಂತೆ ಮೆರವಣಿಗೆ ಒತ್ತಡ ಹೇರಲು ತೆರಳಲು ಕನ್ನಡ ಒಕ್ಕೂಟ ನಿರ್ಧರಿಸಿದೆ