ಕುಂದಾಪುರ ಫೆ 04 : ಕೊಲ್ಲೂರು ಠಾಣಾ ಪೊಲೀಸ್ ಪೇದೆಯೊಬ್ಬರು ತಮ್ಮ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ .04 ರ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಕೊಲ್ಲೂರು ಠಾಣಾ ಪೊಲೀಸ್ ಪೇದೆ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತನ್ನ ಬ್ಯಾಚ್ಮೇಟ್ ರೇಷ್ಮಾ ನಡುವಿನ ಪ್ರೇಮ ಪ್ರಕರಣವೇ ಆತ್ಮಹತ್ಯೆಗೆ ಕಾರಣವೆಂದು ತಿಳಿದು ಬಂದಿದೆ.
ನಾಗರಾಜ್ ಮತ್ತು ರೇಷ್ಮಾ ಒಂದೇ ಬ್ಯಾಚ್ನ ಪೇದೆಗಳಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನಿನ್ನೆ ಇವರಿಬ್ಬರ ನಡುವೆ ರಜೆ ವಿಚಾರದಲ್ಲಿ ಮನಸ್ತಾಪವಾಗಿದ್ದು, ನೀನು ಹೋಗುವುದಾರೆ ನನ್ನ ಡೆಡ್ಬಾಡಿ ನೋಡಿಕೊಂಡು ಹೋಗು ಎಂದು ಬೆದರಿಸಿದ್ದ. ಈ ಹಿಂದೆಯೂ ಹಲವು ಬಾರಿ ಇದೇ ರೀತಿ ನಾಗರಾಜ್ ಬೆದರಿಕೆ ಹಾಕಿದ್ದ ಹಿನ್ನೆಲೆ ರೇಷ್ಮಾ ಈ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ಬೆಳಿಗ್ಗೆ ನಾಗಾರಾಜ್ ಆತ್ಮಹತ್ಯೆಯಿಂದ ಖಿನ್ನತೆಗೊಳಗಾದ ರೇಷ್ಮಾ ಕೊಲ್ಲೂರು ಠಾಣೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೊಲ್ಲೂರು ಠಾಣೆಯ ಸಿಬ್ಬಂದಿಗಳು ಆಕೆಯನ್ನ ರಕ್ಷಿಸಿ, ಕೊಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಾಗರಾಜ್ ಶನಿವಾರ ಬೆಳಿಗ್ಗೆ ಡ್ಯೂಟಿ ಮುಗಿಸಿ ಕೊಲ್ಲೂರು ದೇವಳದ ಸೌಪರ್ಣಿಕ ವಸತಿಗೃಹದಲ್ಲಿ ಇವರಿಗೆ ನೀಡಲಾದ ರೂಮಿನಲ್ಲಿದ್ದರು. ರೂಂನಲ್ಲಿದ್ದ ಇನ್ನೋರ್ವ ಪೇದೆ ಸಂದೀಪ್ ಗಂಗೊಳ್ಳಿಯಲ್ಲಿ ಕರ್ತವ್ಯಕ್ಕೆಂದು ತೆರಳಿದ್ದರು. ರಾತ್ರಿ ಪಾಳಿ ಮುಗಿಸಿಕೊಂಡು ವಾಪಾಸು ಬಂದ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ನಾಗರಾಜ್ ಇದ್ದರು. ಕೊಲ್ಲೂರು ಠಾಣಾ ಪಿಎಸೈ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.