ಕುಂದಾಪುರ, ಫೆ. 05 : ಇಲ್ಲಿನ ಹೊಸ ಬಸ್ ನಿಲ್ದಾಣದ ಸಮೀಪ ಜಗನ್ನಾಥ್ ಎಂಬವರ ಮಾಲಿಕತ್ವದ , ಫ್ಯಾನ್ಸಿ ಹಾಗೂ ಜೆರಾಕ್ಸ್ ಅಂಗಡಿಯೊಂದರಲ್ಲಿ ಫೆ.3 ರ ಶನಿವಾರ ರಾತ್ರಿ 7.30ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಲ್ಲಿದ್ದ ಸಾಮಗ್ರಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು ಸುಮಾರು ನಾಲ್ಕುವರೆ ಲಕ್ಷ ರೂ.ಗೂ ಅಧಿಕ ನಷ್ಟ ಸಂಭವಿಸಿದೆ.
ಎಂದಿನಂತೆ ವ್ಯವಹಾರ ಮುಗಿಸಿ ಸಂಜೆ ಮಾಲೀಕರು ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಲ್ಲಿದ್ದ ವಸ್ತುಗಳಿಗೆ ಬೆಂಕಿ ತಗುಲಿಕೊಂಡಿದ್ದು, ಮಳಿಗೆಯ ಒಳಗಿನಿಂದ ಹೊಗೆ ಬರಲಾರಂಭಿಸಿದ್ದು, ಕೂಡಲೇ ಅಕ್ಕ-ಪಕ್ಕದ ಅಂಗಡಿಯವರು, ಪ್ರತ್ಯಕ್ಷದರ್ಶಿಗಳೆಲ್ಲ ಸೇರಿ ಫ್ಯಾನ್ಸಿ ಅಂಗಡಿಯ ಬಾಗಿಲು ಒಡೆದು ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಅಷ್ಟೊತ್ತಿಗಾಗಲೇ 2 ಜೆರಾಕ್ಸ್ ಯಂತ್ರಗಳು, ಗಿಫ್ಟ್ ಸಾಮಗ್ರಿಗಳು, ಸ್ಟೇಶನರಿ ಸೊತ್ತುಗಳೆಲ್ಲ ಬೆಂಕಿಗೆ ಆಹುತಿಯಾಗಿದ್ದವು. ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.