ಬಂಟ್ವಾಳ, ಫೆ 3: ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ. ಮೂಡ ಗ್ರಾಮದ ವಿವಿಧ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಶನಿವಾರ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ನಗರೋತ್ಥಾನ 3 ನೇ ಹಂತ ಹಾಗೂ ಇತರ ಅನುದಾನ ಸೇರಿ ಒಟ್ಟು ಸುಮಾರು 20.48 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಇವುಗಳಲ್ಲಿ 338 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗತ್ತಿದೆ ಎಂದು ಮಾಹಿತಿ ನೀಡಿದರು.
ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ ಜಕ್ರಿಬೆಟ್ಟುವಿನಲ್ಲಿ 2ನೇ ಹಂತದ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 52.79 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದ್ದು, ಮುಂದಿನ ಮಾರ್ಚ್ ತಿಂಗಳಲ್ಲಿ ಪುರವಾಸಿಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತ್ಯಾಜ್ಯ ನೀರು ನೇತ್ರಾವತಿ ನದಿ ಸೇರಿದಂತೆ 2 ನೇ ಹಂತದ ಒಳಚರಂಡಿ ಯೋಜನೆಗೆ 56.54 ಕೋಟಿ ರೂ. ಅನುದಾನ ಮಂಜೂರಾತಿ ದೊರಕಿದ್ದು, ಶೀಫ್ರದಲ್ಲೇ ಇದರ ಕಾಮಗಾರಿಯನ್ನು ಕೈಗೆತ್ತಿಗೊಳ್ಳಲಾಗುವುದು. ಅಲ್ಲದೇ ಪುರಸಭೆಯನ್ನು ನಗರ ಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದೆ ಎಂದ ಸಚಿವರು, ಕ್ಷೇತ್ರದ ಅಭಿವೃದ್ಧಿಯಲ್ಲಿ ತಾನು ಯಾವುದೇ ಉದಾಸೀನ ತೋರಿಲ್ಲ, ಇದೇ ತನಗೆ ಶ್ರೀರಕ್ಷೆಯಾಗಲಿದೆ ಎಂದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಪಲ್ಲಮಜಲು ಕಲ್ಲಗುಡ್ಡೆ ರಸ್ತೆ ಅಭಿವೃದ್ಧಿ, ಪಲ್ಲಮಜಲು ಮುಖ್ಯರಸ್ತೆ ಅಭಿವೃದ್ಧಿ, ಕಾಮೆರೆಕೋಡಿ ಮೊಡಂಕಾಪು ಮುಖ್ಯ ರಸ್ತೆ, ಗಾಂದೋಡಿ, ಕೈಕಂಬ, ಪರ್ಲಿಯಾ ಮಸೀದಿ ರಸ್ತೆ, ಅಲೆತ್ತೂರು ದೈವಸ್ಥಾನ ರಸ್ತೆ, ಬಿ.ಸಿ.ರೋಡಿನ ಬಸ್ ನಿಲ್ದಾಣದ ಹಿಂಭಾಗ, ಕಾಮಾಜೆ ರಸ್ತೆ, ಪಾಣೆಮಂಗಳೂರಿನ ಕಸ್ಬಾ ಗ್ರಾಮದ ಗೂಡಿನ ಬಳಿ ಟ್ಯಾಂಕ್ ರಸ್ತೆ, ಜೈನರಪೇಟೆ ಮಸೀದಿ ರಸ್ತೆ, ಎಂ.ಎಚ್. ಪಕ್ಕದ ರಸ್ತೆ, ಬೋಗೋಡಿ, ಶಾಂತಿಗುಡ್ಡೆ, ಸುರುಳಿಗುಡ್ಡೆ ಪ್ರದೇಶದ ಸುಮಾರು 15 ಕಡೆಗಳಲ್ಲಿ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಾಯಿತು.