ಬೆಂಗಳೂರು, ಫೆ 3: ಪ್ರಧಾನಿ ನರೇಂದ್ರ ಮೋದಿ ಮಹದಾಯಿ ವಿವಾದ ಇತ್ಯಾರ್ಥಪಡಿಸಬೇಕು ಎಂದು ಒತ್ತಾಯಿಸಿ ಫೆಬ್ರವರಿ 4ರಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಬೆಂಗಳೂರು ಬಂದ್'ಗೆ ಹೈಕೋರ್ಟ್ ತಡೆ ನೀಡಿದೆ.
ಹೀಗಾಗಿ ನಾಳೆ ಕರೆ ನೀಡಿದ್ದ ಬೆಂಗಳೂರು ಬಂದ್ ಹಿಂಪಡೆದಿದ್ದು, ಕೇವಲ ಕರಾಳ ದಿನ ಆಚರಿಸುವುದಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಾಟಾಳ್ ನಾಗರಾಜ್, ಹೈಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ ಮಹದಾಯಿಗಾಗಿ ನಮ್ಮ ಹೋರಾಟ ಮುಂದುವರೆಯಲಿದ್ದು, ಮೋದಿ ರಾಜ್ಯಕ್ಕೆ ಬರುವ ದಿನವನ್ನು ಕರಾಳ ದಿನವಾಗಿ ಆಚರಣೆ ಮಾಡುತ್ತೇವೆ. ಅರಮನೆ ಮೈದಾನದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮಹದಾಯಿ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಪ್ರಧಾನಿಗಳ ಗಮನ ಸೆಳೆಯಲು ಫೆಬ್ರವರಿ 4 ರಂದು ಬಂದ್ ಗೆ ಕರೆ ನೀಡಲಾಗಿತ್ತು. ಆದರೆ ಬಿಜೆಪಿ ಪಿತೂರಿ ನಡೆಸಿ, ಪ್ರತಿಭಟನೆಯನ್ನು ತಡೆದಿದೆ ಎಂದು ಆರೋಪಿಸಿದರು.