ಉಡುಪಿ, ಫೆ 3: ಕೇರಳದ ಕೊಚ್ಚಿನ್ನಲ್ಲಿ ನಡೆದ ಮಿಸ್ ಸೌತ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಮಣಿಪಾಲದ ಎಂಐಸಿ ಅಂತಿಮ ವರ್ಷದ ವಿದ್ಯಾರ್ಥಿನಿ ಸೌಂದರ್ಯ ರಾಯಭಾರಿಯಾಗಿದ್ದಾಳೆ.
ಶಾಸ್ತ್ರಾ ಎಸ್. ಶೆಟ್ಟಿ (20) ಮುಡಿಗೆ ಮಿಸ್ ಕ್ವೀನ್ ಕರ್ನಾಟಕ ಕಿರೀಟ ಏರಿದೆ. ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಒಟ್ಟು 22 ಮಂದಿಯಿದ್ದು ಟಾಪ್ 6 ರಲ್ಲಿ ಶಾಸ್ತ್ರಾ ಎಸ್. ಶೆಟ್ಟಿ ಒಬ್ಬರಾಗಿದ್ದರು. ಇದೀಗ ಶಾಸ್ತ್ರಾ ಅವರು ಜೂನ್, ಜುಲೈಯಲ್ಲಿ ನಡೆಯಲಿರುವ ಮಿಸ್ ಕ್ವೀನ್ ಇಂಡಿಯಾ ಸ್ಪರ್ಧೆಗೆ ನೇರ ಪ್ರವೇಶ ಪಡೆಯಲಿದ್ದಾರೆ.
ಉಡುಪಿ ಶಾಂತಿನಗರದ ಶಶಿ ಶೆಟ್ಟಿ ಹಾಗೂ ಶರ್ಮಿಳಾ ಶೆಟ್ಟಿ ದಂಪತಿಯ ಪುತ್ರಿಯಾದ ಶಾಸ್ತ್ರಾ 2017ರ ಜುಲೈ ತಿಂಗಳಲ್ಲಿ ಬಲ್ಗೇರಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್ ಟೀನ್ ಗ್ರ್ಯಾಂಡ್ ಸೀ ಏಷ್ಯಾ ಪ್ರಶಸ್ತಿ ಗೆದ್ದಿದ್ದಾರೆ. ಮಿಸ್ ಕರಾವಳಿ ಸ್ಟೈಲ್ ಐಕಾನ್, ಮಿಸ್ ಮಂಗಳೂರು ಸ್ಪರ್ಧೆಯಲ್ಲೂ ಗೆದ್ದಿರುವ ಇವರು ಮಣಿಪಾಲದ ಸ್ಕೂಲ್ ಆಫ್ ಕಮ್ಯುನಿಕೇಶನ್ (ಎಂಐಟಿ) ಯಲ್ಲಿ ಅಂತಿಮ ವರ್ಷದ ಮಾಧ್ಯಮ ಮತ್ತು ಸಂವಹನ ಪದವಿ ಓದುತ್ತಿದ್ದಾರೆ.
ಪತ್ರಕರ್ತೆಯಾಗುವ ಬದಲು ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆ ಬರೆದು ಎರಡು ದೇಶಗಳ ನಡುವೆ ರಾಯಭಾರದ ಕೆಲಸ ಮಾಡುವ ಕನಸು ಕಂಡಿದ್ದಾರೆ.