ಪಣಜಿ, ಫೆ 3: ಗೋವಾ ಸರಕಾರ ಬೀಚ್ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಯನ್ನು ನಿಷೇಧಿಸಿದ್ದು, ಮಾರ್ಚ್ನಿಂದ ಅದು ಕಟ್ಟುನಿಟ್ಟಾಗಿ ಜಾರಿಯಾಗುವ ಸಾಧ್ಯತೆಯಿದೆ.
ಗೋವಾ ರಾಜ್ಯದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಿದರೆ, ಕಾನೂನು ಉಲ್ಲಂಘನೆಗಾಗಿ 5,000 ರೂ.ವರೆಗೂ ದಂಡ ಬೀಳಲಿದೆ. ಆದರೆ, ಹೋಟೆಲ್, ರೆಸ್ಟೋರೆಂಟ್ ಮತ್ತು ಮನೆಗಳಲ್ಲಿ ಮದ್ಯ ಸೇವನೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಈ ಮಧ್ಯೆ, ಮೇ ಅಂತ್ಯದ ವೇಳೆಗೆ ರಾಜ್ಯದಲ್ಲಿ ಪ್ಲಾಸ್ಟಿಕ್ ಮೇಲೂ ಸಂಪೂರ್ಣ ನಿಷೇಧ ಹೇರಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್ ಪರಿಕರ್ ಹೇಳಿದ್ದಾರೆ.
ಮಾತ್ರವಲ್ಲದೆ ಎಲ್ಲೆಂದರಲ್ಲಿ ಉಗುಳುವುದು, ಖಾಲಿ ಬಾಟೆಲ್ ಎಸೆಯುವುದು, ಕಸ ಎಸೆಯುವುದು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ತ್ಯಾಜ್ಯ ನಿರ್ವಹಣಾ ಕಾಯಿದೆಗೆ ತಿದ್ದುಪಡಿ ತರಲಾಗುವುದು. ಈ ಎರಡೂ ನಿಯಮಗಳ ಜಾರಿಯಿಂದ ಗೋವಾದಲ್ಲಿ ಕುಡಿದು ಗದ್ದಲ ಮಾಡುವ ಮತ್ತು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕಸ ಎಸೆಯುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ. 90 ರಷ್ಟು ಸಮಸ್ಯೆ ಬಗೆಹರಿಯಲಿದೆ ಎಂದು ಪರಿಕ್ಕರ್ ಹೇಳಿದ್ದಾರೆ.
ಫೆಬ್ರವರಿ ಅಂತ್ಯದಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.