ಮಂಗಳೂರು, ಫೆ 3: ಕೇಂದ್ರ ಸರಕಾರದ ಜನವಿರೋಧಿ ನೀತಿ ಮತ್ತು ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಯಿತು.
ಎತ್ತಿನ ಗಾಡಿ ಹಾಗೂ ಸೈಕಲ್ ಜಾಥಾ ನಡೆಸುವ ಮೂಲಕ ತೈಲ ಬೆಲೆ ಏರಿಕೆಯನ್ನು ಖಂಡಿಸಿದರು. ಜ್ಯೋತಿ ವೃತ್ತದಿಂದ ಆರಂಭಿಸಿ ಡಿಸಿ ಕಚೇರಿಯವರೆಗೆ ಜಾಥಾ ನಡೆಸಿದ ಪ್ರತಿಭಟನಾಕಾರರು ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಜೆ.ಆರ್ ಲೋಬೊ, ಕೇಂದ್ರ ಸರಕಾರದ ತೈಲ ನೀತಿಯಿಂದಾಗಿ ದೇಶದಲ್ಲಿ ಬಡ ಜನರ ಬದುಕು ಕಷ್ಟಕರವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆಯಲ್ಲಿ ಗಣನೀಯ ಇಳಿಕೆ ಉಂಟಾಗಿದ್ದರೂ ಭಾರತದಲ್ಲಿ ಇದರ ಯಾವುದೇ ಬದಲಾವಣೆ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಜನರ ಅರಿವಿಗೆ ಬಾರದಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ದೇಶದಲ್ಲಿ ಗರಿಷ್ಟ ಮಟ್ಟಕ್ಕೆ ಏರಿದೆ. ಇದು ಕೇಂದ್ರ ಸರಕಾರಕ್ಕೆ ಸಾಮಾನ್ಯ ಜನರ ಮೇಲಿರುವ ತಾತ್ಸಾರ ಮನೋಭಾವವನ್ನು ಸೂಚಿಸುತ್ತಿದೆ. ನರೇಂದ್ರ ಮೋದಿ ಸರಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು. ಜನಸಾಮಾನ್ಯರನ್ನು ಕೊಳ್ಳೆ ಹೊಡೆಯುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಪೆಟ್ರೋಲಿಯಂ ಬೆಲೆ ಏರಿಕೆಯಿಂದಾಗಿ ದಿನನಿತ್ಯ ಆಹಾರ ಸಾಮಾಗ್ರಿಗಳ ಬೆಲೆ ಗಗನಕ್ಕೇರುತ್ತಿದೆ. ಗ್ಯಾಸ್ ಸಿಲಿಂಡರ್ ಬೆಲೆ ದಾಖಲೆಯ ಮೊತ್ತಕ್ಕೆ ಏರಿದೆ. ಹೀಗೆ ಮುಂದುವರಿದರೆ ಮಹಿಳೆಯರು ಅಡುಗೆ ಕೋಣೆಗಳನ್ನು ಮುಚ್ಚಿ ಉಪವಾಸ ಬೀಳುವ ಸಮಯ ದೂರವಿಲ್ಲ. ದುಡಿದ ಸಂಪಾದನೆ ಎಲ್ಲವೂ ಗ್ಯಾಸ್ ಹಾಗೂ ಅಹಾರ ವಸ್ತುಗಳಿಗೆ ವಿನಿಯೋಗಿಸುವ ಸ್ಥಿತಿ ನಮ್ಮ ಮುಂದಿದೆ ಎಂದು ಹೇಳಿದರು.
ಮಹಿಳೆಯರ ಗೋಳನ್ನು ಅರ್ಥ ಮಾಡದ ಮೋದಿ ಸರಕಾರವು ಗೊತ್ತುಗುರಿಯಿಲ್ಲದ ಬಜೆಟ್ ಮಂಡಿಸಿ ಸುಮ್ಮನಾಗಿದ್ದಾರೆ. ಈ ದೇಶದಲ್ಲಿ ಬಡವರಿಗೆ, ಮಹಿಳೆಯರಿಗೆ ಸ್ವಲ್ಪವೂ ಬೆಲೆಯಿಲ್ಲದಾಗಿದೆ. ಮಹಿಳೆಯರ ತಾಳ್ಮೆಗೆ ಒಂದು ಮಿತಿಯಿದೆ. ಇದೀಗ ಸಹನೆಯ ಕಟ್ಟೆಯೊಡೆದು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಲೆಟ್ ಪಿಂಟೊ ಕೇಂದ್ರ ಸರಕಾರದ ಮೇಲೆ ಹರಿಹಾಯ್ದರು.
ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಲೆಟ್ ಪಿಂಟೊ, ಮಂಗಳೂರು ಮೇಯರ್ ಕವಿತಾ ಸನಿಲ್, ಕೋರ್ಪೊರೇಟರ್ ಸಬಿತಾ ಮಿಸ್ಕಿತ್ ಮೊದಲಾವರು ಉಪಸ್ಥಿತರಿದ್ದರು.