ಸುಳ್ಯ, ಫೆ 3: ಕೆಲ ದಿನಗಳಿಂದ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿ ಮತ್ತೆ ಸದ್ದು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗಿನ ಗಡಿ ಪ್ರದೇಶದಲ್ಲಿ ಮತ್ತೆ ನಕ್ಸಲರು ಮತ್ತೆ ಕಾಣಿಸಿಕೊಂಡಿರುವುದು ಸ್ಥಳೀಯ ಜನರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ. ಈ ಹಿಂದೆ ನಕ್ಸಲರು ಗಡಿಭಾಗದ ಮೂಲಕ ರಾಜ್ಯದೊಳಗೆ ನುಗ್ಗುವ ಸಾಧ್ಯತೆಗಳು ಹೆಚ್ಚಿರುವ ಕಾರಣದಿಂದಾಗಿ ಮುಂಜಾಗ್ರತೆ ಕ್ರಮವಾಗಿ ನಕ್ಸಲ್ ನಿಗ್ರಹ ಪಡೆಬಿಸಿಮುಟ್ಟಿಸುವ ಸಲುವಾಗಿ ಕೂಂಬಿಂಗ್ ನಡೆಸಿದ್ದರು. ಆದರೆ ಒಮ್ಮೆ ಕಣ್ಮರೆಯಾಗಿದ್ದ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸುಳ್ಯ ತಾಲೂಕಿನ ಕೋಯ್ನಾಡು ಸಮೀಪದ ಗುಡ್ಡೆಗದ್ದೆಯ ದಯಾನಂದ ಅವರಿಗೆ ಸೇರಿದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ನಕ್ಸಲರನ್ನು ನೋಡಿದ್ದಾರೆ. ಶಸ್ತ್ರಧಾರಿಗಳಾಗಿದ್ದ 3 ಮಂದಿ ನಕ್ಸಲರು ಹಾಡಹಗಲೇ ಪ್ರತ್ಯಕ್ಷವಾಗಿರುವುದು ಇದೀಗ ಜನರ ಗೊಂದಲಕ್ಕೆ ಕಾರಣವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಸುಬ್ರಹ್ಮಣ್ಯ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದರು, ಇದೇ ತಂಡ ಸುಳ್ಯ ತಾಲೂಕಿನ ಕೋಯ್ನಾಡು ಸಮೀಪದ ಗುಡ್ಡೆಗದ್ದೆಯಲ್ಲಿ ಓಡಾಟ ನಡೆಸುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮಾಹಿತಿ ನೀಡಲಾಗಿದೆ. ಸುಳ್ಯ ಮತ್ತು ಸಂಪಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.