ಸುಳ್ಯ, ಫೆ 2: ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸಲು ದುಡಿಯುವ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ನೀಡಲಾಗಿದೆ ಎಂದು ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ ಹೇಳಿದರು.
ಅಲ್ಪಸಂಖ್ಯಾತ ಘಟಕದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಗ್ರಾಮ ಮಟ್ಟದಲ್ಲಿ ಪಕ್ಷದ ಪ್ರಮಾಣಿಕ ಕೆಲಸ ಆಗಬೇಕು. ಹಿಂದಿನ ಕಾಲದಲ್ಲಿ ನಾಯಕನ ಸುತ್ತ ತಿರುಗುವ ಮುಖಂಡರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿತ್ತು. ಈಗ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಆಗುತ್ತಿದೆ. ಮುಂದಿನ ಚುನಾವಣೆಯ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ ಅಭಿವೃದ್ದಿ ವಿಚಾರದಲ್ಲಿ ಚುನಾವಣೆ ನಡೆಯುತ್ತಿಲ್ಲ. ಬದಲಾಗಿ ಹಿಂದೂಗಳ ಮೇಲೆ ಮುಸ್ಮಿಮರನ್ನು ಎತ್ತಿಕಟ್ಟಿ ಕೋಮುದ್ವೇಷದ ವಿಷಬೀಜದ ಮಧ್ಯೆ ಚುನಾವಣಾ ವಿಷಯವಾಗಿಸುತ್ತಿದ್ದಾರೆ. ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳೇ ರಾಮ ಮತ್ತು ಅಲ್ಲಾವುನ ಮದ್ಯೆ ನಡೆಯುವ ಚುನಾವಣೆ ಎಂದು ದ್ವೇಷ ಭಾವನೆಗೆ ವೇದಿಕೆ ಕಲ್ಪಿಸುತ್ತಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಮಾತನಾಡಿ, ಬಿಜೆಪಿ ಅಭಿವೃದ್ದಿ ವಿಚಾರವನ್ನು ಇಟ್ಟುಕೊಂಡು ಚುನಾವಣೆಗೆ ಧುಮುಕುತ್ತಿದೆ. ಕೇಂದ್ರ ಸರಕಾರದಿಂದ ಇಲ್ಲಿಯವರೆಗೆ ಯಾವ ಅಭಿವೃದ್ದಿಯೂ ಆಗಿಲ್ಲ ಎಂಬುದು ಬಿಜೆಪಿಗೆ ತಿಳಿದಿದೆ. ಈ ಕಾರಣದಿಂದ ಬಿಜೆಪಿ ರಾಮ ಮತ್ತು ಅಲ್ಲಾವುನ ಮಧ್ಯೆ ಚುನಾವಣೆ ವಿಷಯವಾಗಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಮುಕ್ತ ಮಾಡಲು ಬಿಜೆಪಿಯ ಜನ್ಮ ಕಾಲದಲ್ಲಿಯೂ ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತೆ ಪಿನಿಕ್ಸ್ನಂತೆ ಎದ್ದು ಬರಲಿದೆ. ಅಲ್ಪಸಂಖ್ಯಾತರ ಕಷ್ಟಗಳಿಗೆ ಸ್ಪಂದಿಸಿದಾಗ ಮಾತ್ರ ಅವರ ಮತ ಭದ್ರವಾಗುತ್ತದೆ. ಕಾಂಗ್ರೆಸ್ನ್ನು ಗೆಲ್ಲಿಸುವ ಮತ್ತು ಬಿಜೆಪಿಯನ್ನು ಸೋಲಿಸುವ ಶಕ್ತಿ ಅಲ್ಪಸಂಖ್ಯಾತರಲ್ಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ದ.ಕ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹಾಜಿ ಎನ್ ಎಸ್. ಕರೀಮ್ ವಹಿಸಿದ್ದರು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿ.ಕೆ ಹಮೀದ್, ಕೆಪಿಸಿಸಿ ಸದಸ್ಯ ಡಾ| ರಘು, ಮಾಜಿ ಶಾಸಕ ಕೆ. ಕುಶಲ, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಉಪಾದ್ಯಕ್ಷ ಇಸ್ಮಾಯಿಲ್ ಮಾಣಿ, ರಾಜ್ಯ ಮುಖಂಡ ನೂರ್ದ್ದೀನ್ ಸಾಲ್ಮರ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಕುಂಞಿಪಳ್ಳಿ, ಜಿಲ್ಲಾ ಉಪಾದ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ, ತಾ.ಪಂ ಸದಸ್ಯ ಅಬ್ದುಲ್ ಗಫೂರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ, ಅಲ್ಪಸಂಖ್ಯಾತ ಘಟಕದ ಮುಖಂಡರಾದ ಬೀರಾಮೊದೀನ್, ಜೂಲಿಯಾನ ಕ್ರಾಸ್ತಾ, ಶಾಫಿ ಕುತ್ತಮೊಟ್ಟೆ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ ಯುವ ಇಂಟಕ್ ಅದ್ಯಕ್ಷ ಹಮೀದ್ ಕುತ್ತಮೊಟ್ಟೆ, ಲಾರೆನ್ಸ್ ಡಿಸೋಜಾ, ಮೂಸಕುಂಞಿ ಪೈಂಬೆಚ್ಚಾಲ್, ಇಸ್ಮಾಯಿಲ್ ಪಡ್ಪಿನಂಗಡಿ, ಜಮಾಯುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.