ಉಡುಪಿ, ಫೆ 2: ಅಸಹಾಯಕ ಪರಿಸ್ಥಿತಿಯಲ್ಲಿ ಪತ್ತೆಯಾದ ದೆಹಲಿ ಮೂಲದ ಯುವತಿಯನ್ನು ಜ.31ರಂದು ಉಡುಪಿಯಲ್ಲಿ ರಕ್ಷಿಸಿ, ಮಂಜೇಶ್ವರದ ಆಶ್ರಮದಲ್ಲಿ ಯುವತಿಗೆ ತಾತ್ಕಾಲಿಕ ನೆಲೆಯನ್ನು ಕಲ್ಪಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಮತ್ತು ವಿಶು ಶೆಟ್ಟಿ ಎಂಬುವವರು ಯುವತಿಗೆ ರಕ್ಷಣೆಯನ್ನು ನೀಡಿದ್ದು, ಇದೀಗ ಯುವತಿಗೆ ಸೂಕ್ತವಾದ ಆಶ್ರಯವನ್ನು ಮಂಜೇಶ್ವರದ ಶ್ರೀಸಾಯಿ ಸೇವಾಶ್ರಮದಲ್ಲಿ ನೀಡಲಾಗಿದೆ.
ಜ.31 ರಂದು ಸುಮಾರು 35 ರ ಆಸುಪಾಸು ವಯಸ್ಸಿನ, ಹಿಂದಿ ಭಾಷೆ ಮಾತನಾಡುವ ಯುವತಿಯೋರ್ವಳು ಉಡುಪಿಯ ಪೇಜಾವರ ಮಠಕ್ಕೆ ಬಂದಿದ್ದಾಳೆ. ಅಲ್ಲಿ ತನ್ನ ಅಸಹಾಯಕ ಪರಿಸ್ಥಿತಿಯನ್ನು ಮಠದ ವಾಸಿಗಳಲ್ಲಿ ಹೇಳಿ ಕೊಂಡಿದ್ದಾಳೆ. ಮಠದ ಸಿಬ್ಬಂದಿಗಳು ವಿಷಯವನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ತಿಳಿಸಿದ್ದಾರೆ. ನಿತ್ಯಾನಂದ ಒಳಕಾಡು ಗೆಳೆಯ ತಾರಾನಾಥ್ ಮೇಸ್ತ ಅವರೊಂದಿಗೆ ಜೊತೆಗೂಡಿ ಮಠದಲ್ಲಿದ್ದ ಯುವತಿಯನ್ನು ಸಂಪರ್ಕಿಸಿದ್ದಾರೆ. ನಂತರ ಯುವತಿಯಲ್ಲಿ ಸಮಸ್ಯೆಯನ್ನು ವಿಚಾರಿಸಿದ್ದಾರೆ.
ತನಗೊಂದು ಆಶ್ರಯ ಬೇಕು. ಭಕ್ತಿ ಮಾರ್ಗದಲ್ಲಿ ನಾನು ದಿನ ಕಳೆಯುತ್ತಿದ್ದೇನೆ. ಈ ಹಿಂದೆ ನಾನು ದೆಹಲಿಯ ಆಶ್ರಮವೊಂದರಲ್ಲಿ ಆಧ್ಯಾತ್ಮ ಬದುಕು ಸಾಗಿಸುತ್ತಿದ್ದೆ ಎಂದು ಯುವತಿ ಹೇಳಿಕೆ ನೀಡಿದ್ದು, ನನ್ನ ಹೆಸರು ರಿಂಕು ಶರ್ಮ, ತಂದೆ ರಾಮ್ ಸುರೀಟ್ ಸಿಂಗ್, ತಾಯಿ ಲಾಲ್ ಮತಿ ದೇವಿ, ಬ್ಯೂಟಿ ಪಾರ್ಲರ್ ವೃತ್ತಿಯನ್ನು ದೆಹಲಿಯಲ್ಲಿ ಮಾಡಿಕೊಂಡಿದ್ದೇನೆ ಎಂದು ಗೊಂದಲದ ಮಾಹಿತಿ ನೀಡಿದ್ದಾಳೆ.
ಯುವತಿಯನ್ನು ಕಾಣುವಾಗ ಈಕೆ ಮಾನಸಿಕವಾಗಿ ನೊಂದು ಶೋಷಣೆಗೆ ಒಳಪಟ್ಟವಳಂತೆ ಮೆಲ್ನೋಟಕ್ಕೆ ಕಾಣುತ್ತಾಳೆ. ಭಕ್ತಿ ಮಾರ್ಗ ಚಿಂತನೆಯ ಮಾತುಗಳನ್ನು ಆಡುತ್ತಾಳೆ. ಜೊತೆಯಲ್ಲಿ ಅವಧೂತ ಸಾಧು ಸಂತರ ಫೋಟೋಗಳನ್ನು, ಧಾರ್ಮಿಕ ಗ್ರಂಥಗಳನ್ನು, ಬಟ್ಟೆ ಬರೆಗಳನ್ನು ಜೊತೆಯಲ್ಲಿ ತಂದಿದ್ದಾಳೆ. ನಾನು ಶ್ರೀಕೃಷ್ಣನ ಭಕ್ತೆ, ಗುರು ಆಜ್ಞೆಯಂತೆ ಲೋಕ ಕಲ್ಯಾಣಕ್ಕೆ ಸಂಚಾರಕ್ಕೆ ಬಂದಿದ್ದೇನೆ ಎಂದು ಗೊಂದಲದ ಮಾತುಗಳನ್ನಾಡುತ್ತಾಳೆ.
ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ತಾರಾನಾಥ್ ಮೇಸ್ತ ಶಿರೂರು ಯುವತಿಯ ಸ್ಥಿತಿ ಅರ್ಥಮಾಡಿಕೊಡು, ಯುವತಿಗೆ ಯೋಗ್ಯವಾದ ಸುವ್ಯವಸ್ಥಿತವಾದ ಮಂಜೇಶ್ವರದ ದೈಗುಳಿಯಲ್ಲಿರುವ ಶ್ರೀ ಸಾಯಿ ಸೇವಾಶ್ರಮವನ್ನು ಗುರುತಿಸಿದ್ದಾರೆ. ಆಶ್ರಮದ ಸಂಚಾಲಕರಾದ ಡಾ.ಉದಯ ಕುಮಾರ್ ಅವರನ್ನು ಸಂಪರ್ಕಿಸಿ ಅಸಹಾಯಕ ಮಹಿಳೆಯ ವಿಚಾರವನ್ನು ಹೇಳಿದ್ದಾರೆ. ಸ್ಪಂದಿಸಿದ ಸಂಚಾಲಕರು ಆಶ್ರಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಅವರ ಭರವಸೆಯಂತೆ ಮೂವರು ಸಮಾಜಸೇವಕರು ಕಾನೂನು ಪ್ರಕ್ರಿಯೆ ನಡೆಸಿ ಫೆ.1ರಂದು ಆಶ್ರಮಕ್ಕೆ ದಾಖಲು ಪಡಿಸಿದ್ದಾರೆ. ವಿಶು ಶೆಟ್ಟಿ ಅವರು ಹೋಗಿ ಬರುವ ಸಂಚಾರಕ್ಕೆ ವಾಹನ ಸೇವೆ ಉಚಿತವಾಗಿ ನೀಡಿದ್ದಾರೆ.
ಯುವತಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ. ದೈಹಿಕ ಆರೋಗ್ಯ ತಪಾಸಣೆ ನೆಡಸಲಿದ್ದೇವೆ. ಅವಳು ಬಯಸಿದ ವ್ಯವಸ್ಥೆಯನ್ನು ಒದಗಿಸುತ್ತೇವೆ. ಹಂತ ಹಂತವಾಗಿ ವಿಚಾರಣೆ ನಡೆಸಿ ಆಕೆಯ ವಾಸ್ತವ್ಯ ವಿಳಾಸ ಕಲೆ ಹಾಕುತ್ತೇವೆ ಎಂದು ಆಶ್ರಮದ ಸಂಚಾಲಕರಾದ ಡಾ. ಉದಯ ಕುಮಾರ್ ಅವರು ಹೇಳಿದ್ದಾರೆ.
ಯುವತಿಯ ಸಂಬಂಧಿಕರು ಉಡುಪಿ ನಗರ ಮಹಿಳಾ ಠಾಣೆಯನ್ನು ಸಂಪರ್ಕಿಸಬಹುದು ಎಂದು ಸಾಮಾಜಿಕ ಕಾರ್ಯಕರ್ತರ ಪ್ರಕಟಣೆ ತಿಳಿಸಿದೆ.