ಮಂಜೇಶ್ವರ,ಸೆ17: ಲಾರಿ ಚಾಲಕ ಹಾಗೂ ಕ್ಲೀನರ್ಗೆ ಆಟಿಕೆ ಕೋವಿ ತೋರಿಸಿ ಬೆದರಿಕೆಯೊಡ್ಡಿ ಎರಡು ಮೊಬೈಲ್ ಫೋನ್ ಹಾಗೂ ನಗದು ದೋಚಿದ ಆರೋಪಿಯನ್ನು ಬಂಧಿಸುವಲ್ಲಿ ಮಂಜೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದ್ಯೋಡು ಅಡ್ಕ ಜುಮಾ ಮಸೀದಿ ಸಮೀಪದ ನಿವಾಸಿ ಆಟೋ ಚಾಲಕ ಅಬ್ದುಲ್ ಲತೀಫ್ ಬಂಧಿತ ಆರೋಪಿ.
ಸೆ.8 ರಂದು ಮುಂಜಾನೆ ಉಪ್ಪಳ ಪೆಟ್ರೋಲ್ ಬಂಕ್ ಸಮೀಪ ದರೋಡೆ ಘಟನೆ ನಡೆದಿತ್ತು. ಮಹಾರಾಷ್ಟ್ರ ದಿಂದ ಕೊಚ್ಚಿಗೆ ಸರಕು ಸಾಗಿಸುತ್ತಿದ್ದ ಲಾರಿ ಚಾಲಕ ಮಹಾರಾಷ್ಟ್ರ ಸಾಂಗ್ಲಿಯ ಗುರುಬಾಸು ಮುರು ಗಪ್ಪ ಹಾಗೂ ಕ್ಲೀನರ್ ಲಾರಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಕೋವಿ ತೋರಿಸಿ ಲಾರಿ ನೌಕರರಲ್ಲಿ ಹಣ ಕೇಳಿದ್ದು, ಹಣ ಇಲ್ಲವೆಂದು ತಿಳಿಸಿದಾಗ ಕೋವಿಯನ್ನು ಚಾಲಕ ಮುರುಗಪ್ಪನ್ರ ಕುತ್ತಿಗೆಗೆ ಗುರಿಯಿಟ್ಟು ಬೆದರಿಕೆಯೊಡ್ಡಿ ಅವರ ಕೈಯಲ್ಲಿದ್ದ 1000 ರೂಪಾಯಿ ಹಾಗೂ ಎರಡು ಮೊಬೈಲ್ಗಳನ್ನು ಕಸಿದು ಪರಾರಿಯಾಗಿದ್ದರು. ಬಂಧಿತ ಆರೋಪಿಯಿಂದ ಬೈಕ್ ಹಾಗೂ ಎರಡು ಮೊಬೈಲ್ ಫೋನ್ ಪೊಲೀಸರು ವಶಪಡಿಸಿ ಕೊಂಡಿದ್ದಾರೆ.