ಕಾಸರಗೋಡು, ಫೆ 2: ನಗರದ ಪ್ಲಾಸ್ಟಿಕ್ ಗೋದಾಮಿನಲ್ಲಿ ರಾತ್ರಿ ವೇಳೆ ಅಗ್ನಿ ಅನಾಹುತ ಸಂಭವಿಸಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎನ್ನವ ಮಾಹಿತಿ ಲಭ್ಯವಾಗಿದೆ.
ನಗರದ ಕೋಟೆ ರಸ್ತೆಯ ಮೂರು ಅಂತಸ್ತಿನ ಕಟ್ಟಡವೊಂದರಲ್ಲಿ ಈ ದುರಂತ ನಡೆದಿದೆ. ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ನ್ಯಾನೋ ಪ್ಲಾಸ್ಟಿಕ್ ಎಂಬ ಗೋದಾಮಿನಲ್ಲಿ ಈ ಅವಘಡ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಪ್ಲಾಸ್ಟಿಕ್ ಉತ್ಪನ್ನಗಳು ಬೆಂಕಿಯಲ್ಲಿ ಸುಟ್ಟುಹೋಗಿದೆ.
ಸಂಜೆಯ ವೇಳೆಗೆ ಮಾಲಕ ಗೋದಾಮಿಗೆ ಬೀಗ ಜಡಿದು ತೆರಳಿದ್ದನು. ಆದರೆ ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡಕ್ಕೂ ಬೆಂಕಿ ಹರಡಿದೆ. ಸಮೀಪದ ಕಟ್ಟಡವೊಂದರಲ್ಲಿ ವಾಸವಾಗಿರುವ ಹೊರ ರಾಜ್ಯ ಕಾರ್ಮಿಕರು ಗಮನಿಸಿ ಮಾಹಿತಿ ನೀಡಿದ್ದು, ಬಳಿಕ ಸ್ಥಳೀಯರು ಅಗ್ನಿಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತಲುಪಿದ ಅಗ್ನಿಶಾಮಕದಳದ ಮೂರು ಘಟಕಗಳ ಗಂಟೆಗಳ ಕಾಲ ಪ್ರಯತ್ನಿಸಿ, ಬೆಂಕಿಯನ್ನು ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ಘಟನೆಗೆ ಕಾರಣ ಎನ್ನಲಾಗಿದೆ.