ಮಂಗಳೂರು, ಫೆ 2: ಇತ್ತೀಚೆಗೆ ತಮ್ಮ ನಿವಾಸದಲ್ಲಿ ನಡೆದ ಔತಣಕೂಟದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದು, ಖಾದರ್ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಖಾದರ್ ಮನೆಗೆ ಬಂದ ಸಿಎಂ ಅವರು ಸಂತೋಷ್ ಮನೆಗೆ ಆಗಮಿಸಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕಿತ್ತು. ಆದರೆ ಸಿಎಂ ಸಂತೋಷ್ ಹತ್ಯೆ ಬಳಿಕ ಉಂಟಾಗಿದ್ದ ಗಲಭೆಯಲ್ಲಿ ಪಾಲ್ಗೊಂಡಿದ್ದವರ ಜೊತೆಗೆ ಕುಳಿತು ಭೋಜನ ಸವೆದಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಈ ವಿಚಾರ ಸಂಬಂಧ ಬಿಜೆಪಿ ನಾಯಕರಿಂದ ತೀವ್ರ ವಿರೋಧ ಎದುರಿಸುತ್ತಿರುವ ಸಚಿವ ಯುಟಿ ಖಾದರ್ ಇದೀಗ ಆಕ್ರೋಶ ವ್ಯಕ್ತಪಡಿಸಿದ್ದು, ಈ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಯುಟಿ ಖಾದರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ಟಾರ್ಗೆಟ್ ಮಾಡಿಕೊಂಡಿತ್ತು. ಪ್ರತಿಯೊಂದು ವಿಚಾರಕ್ಕೂ ಸಿಎಂ ಅವರನ್ನು ದೂಷಿಸುವುದು ಸರಿಯಲ್ಲ ಎಂದು ಖಾದರ್ ಹೇಳಿದ್ದಾರೆ.
ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಲು ಏನೂ ಇಲ್ಲ. ಈ ಕಾರಣಕ್ಕಾಗಿ ಅವರು ಇಲ್ಲ ಸಲ್ಲದ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ. ಕಳೆದ ನಾಲ್ಕು ತಿಂಗಳಿನಿಂದ ಯಾವ ಯಾವ ಹತ್ಯೆಯಾಗಿದೆ ಎಂಬುದನ್ನು ಲೆಕ್ಕ ಹಾಕಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಔತಣಕೂಟದ ಆರೋಪಗಳಿಗೆ ಮಹತ್ವ ಕೊಡುಪ ಅಗತ್ಯ ಇಲ್ಲ ಎಂದು ಯುಟಿ ಖಾದರ್ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
ಸುಮಾರು ನಾಲ್ಕು ವರ್ಷಗಳ ಬಳಿಕ ಸಿಎಂ ತಮ್ಮ ನಿವಾಸಕ್ಕೆ ಆಗಮಿಸಿದ್ದಾರೆ. ಹೀಗಾಗಿ ಅವರಿಗಾಗಿ ಔತಣಕೂಟ ಏರ್ಪಡಿಸಿದ್ದೆ. ಈ ಔತನ ಕೂಟ ಪ್ರೀತಿಯಿಂದ ಮಾಡಿದ್ದೇ ಹೊರತು ಇನ್ಯಾವುದೇ ವಿಚಾರಕ್ಕೂ ಅಲ್ಲ. ಸುಮ್ಮನೆ ಸಿಎಂ ವಿರುದ್ಧ ಆರೋಪ ಸರಿಯಲ್ಲ. ನಮ್ಮ ಮನೆಯ ಊಟ, ಸೌಹಾರ್ದ ಕೂಟಕ್ಕೂ ನಾವು ಬಿಜೆಪಿಯವರ ಅನುಮತಿ ಪಡೆಯಬೇಕೇ..? ಎಂದು ಕೇಳಿದ್ದಾರೆ.