ಬೆಂಗಳೂರು, ಫೆ 2: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ 2018ನೇ ಸಾಲಿನ ಬಜೆಟ್ ಯಾವುದೇ ದೂರದೃಷ್ಟಿ ಇಲ್ಲದ, ಗೊತ್ತು ಗುರಿ ಇಲ್ಲದ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಕೇಂದ್ರ ಬಜೆಟ್ ಬಗ್ಗೆ ನಾವು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಅರುಣ್ ಜೇಟ್ಲಿ ರಾಜ್ಯದ ಜನತೆಗೆ ನಿರಾಶೆ ಮಾಡಿದ್ದಾರೆ. ಆರೋಗ್ಯ ವಿಮೆ ಯೋಜನೆ ಸೇರಿದಂತೆ ಹಲವು ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ. ಆದರೆ ಅದಕ್ಕೆ ಯಾವುದೇ ಹಣ ಹಂಚಿಕೆ ಮಾಡಿಲ್ಲ. ಕಳೆದ ವರ್ಷ ಘೋಷಿಸಿದ ಯೋಜನೆ ಇನ್ನೂ ಜಾರಿಯಾಗಿಲ್ಲ ಎಂದು ತಿಳಿಸಿದರು.
ರೈತರ ಸಾಲ ಮನ್ನಾ ಸೇರಿದಂತೆ ರಾಜ್ಯಕ್ಕೆ ಯಾವುದೇ ವಿಶೇಷವಾದ ಯೋಜನೆ ಘೋಷಿಸಿಲ್ಲ. ಕೇವಲ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಇದು ಅಭಿವೃದ್ಧಿ ಆಧಾರಿತ ಬಜೆಟ್ ಅಲ್ಲ. ಈ ಬಜೆಟ್ ರಾಜ್ಯದ ಜನತೆಗೆ ತೀವ್ರ ನಿರಾಶೆ ಮೂಡಿಸಿದೆ. ಅವರು ಕೇವಲ ಮಾತನಾಡುತ್ತಾರೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ ಎನ್ನುತ್ತಿದ್ದಾರೆ. ಆದರೆ ಕನಿಷ್ಠ ಬೆಂಬಲ ಬೆಲೆಗಾಗಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.