ಬೆಂಗಳೂರು, ಫೆ 01: ಬೆಂಗಳೂರಿನ ಜೆ.ಪಿ ನಗರದ ನಿವಾಸಿ , ಆಟೋ ಚಾಲಕ ಸಂತೋಷ ಎಂಬಾತನನ್ನು ದುಷ್ಕರ್ಮಿಗಳು ಜ.31 ರ ರಾತ್ರಿ ಚೂರಿಯಲ್ಲಿ ಇರಿದು ಕೊಲೆ ಮಾಡಿದ್ದಾರೆ. ಜ.31 ರ ಬುಧವಾರ ರಾತ್ರಿ 7:30 ಸುಮಾರಿಗೆ ಸಂತೋಷ್ ನಂದಿದುರ್ಗಾ ರಸ್ತೆಯ ಚಿನ್ನಪ್ಪ ಗಾರ್ಡನ್ ಬಳಿ ತಮ್ಮ ಮನೆಯ ಸಮೀಪವೇ ಇದ್ದ ಬೇಕರಿಯಲ್ಲಿ ಟೀ ಸೇವಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಅದೇ ಗಲ್ಲಿಯ ವಾಸೀಮ್, ಉಮರ್, ಫಿಲಿಪ್ಸ್ ಮತ್ತು ಇರ್ಫಾನ್ ಎಂಬವರು ಕೂಡ ಅಲ್ಲೇ ಟೀ ಕುಡಿಯಲು ಬಂದಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಕೋಪಗೊಂಡ ವಾಸೀಮ್ ಎಂಬಾತ ತನ್ನ ಬಳಿ ಇದ್ದ ಚಾಕುವಿನಿಂದ ಸಂತೋಷ್ ತೊಡೆಗೆ ಚುಚ್ಚಿದ್ದಾನೆ. ಪರಿಣಾಮ ತೀವ್ರ ರಕ್ತ ಸ್ರಾವದಿಂದ ಸಂತೋಷ್ ಕೊನೆಯುಸಿರೆಳೆದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸದ್ಯ ಪ್ರಕರಣ ಸಂಬಂಧ ವಸೀಂ, ಫಿಲಿಪ್ಸ್ ಎಂಬ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಈತ ಬಿಜೆಪಿ ಪಕ್ಷದ ಪರ ಓಡಾಡಿಕೊಂಡಿದ್ದ ಎನ್ನಲಾಗಿದ್ದು ಘಟನೆ ನಡೆದ ಬಗ್ಗೆ ಸುಳಿವು ಸಿಕ್ಕಿದ ತಕ್ಷಣ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಠಾಣೆಯೆದುರು ಪ್ರತಿಭಟನೆ ನಡೆಸಿದ್ದಾರೆ.ಸಂತೋಷ್ ಹತ್ಯೆ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.
ಇನ್ನು ಹತ್ಯೆಯಾದ ಸಂತೋಷ್ ಮನೆಗೆ ಭೇಟಿ ನೀಡಿ ಮನೆಯವರನ್ನು ಸಂತೈಸಿ ಮಾತನಾಡಿದ ಮಾಜಿ ಡಿಸಿಎಂ ಅಶೋಕ್, ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾಗಿದ್ದು ಈ ಹತ್ಯೆಯ ಹಿಂದೆ ಎಸ್ ಡಿಪಿ ಡಿಪಿಐ ಮತ್ತು ಕೆಎಫ್ಡಿ ಕೈವಾಡ ಇದೆ. ಅಲ್ಲದೆ ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ತನಿಖೆ ಪ್ರಾರಂಭವಾಗುವ ಮುನ್ನವೇ ಈ ಕೊಲೆ ಪೂರ್ವ ದ್ವೇಷದಿಂದ ನಡೆದಿದ್ದು ಎನ್ನುವ ರಾಜ್ಯ ಸರ್ಕಾರದ ಹೇಳಿಕೆ ಖಂಡನೀಯ ಎಂದರು. ಅಲ್ಲದೆ ಹತ್ಯೆಯಾದ ಸಂತೋಷ ಮನೆಗೆ ಕಮಿಷನರ್ ಮತ್ತು ಗೃಹ ಸಚಿವರು ಭೇಟಿ ನೀಡದ ಹೊರತು ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಸಂತೋಷ್ ಹತ್ಯೆ ಪ್ರಕರಣದ ತನಿಖೆಯನ್ನು ಎನ್ಐಎಗೆ ನೀಡುವಂತೆ ಆಗ್ರಹಿಸಿದರು.
ಪ್ರಕರಣ ಸಿಸಿಬಿಗೆ
ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರು ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಹತ್ಯೆಗೀಡಾದ ಸಂತೋಷ್ ಮನೆಯವರು ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದಿರುವ ಕಾರಣಕ್ಕಾಗಿ ಪ್ರಕರಣವನ್ನು ಈಗಾಗಲೆ ಸಿಸಿಬಿಗೆ ವರ್ಗಾಯಿಸಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯಾಧ್ಯಂತ ಪ್ರತಿಭಟನೆ
ಸಂತೋಷ್ ಹತ್ಯೆ ಖಂಡಿಸಿ ಬಿಜೆಪಿ ಘಟಕ ಶುಕ್ರವಾರ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ದಲಿತ ವರ್ಗಕ್ಕೆ ಸೇರಿರುವ ಸಂತೋಷ್ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡಬೇಕು ಮತ್ತು ಕೂಡಲೇ 5 ಲಕ್ಷ ಪರಿಹಾರ ಘೋಷಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.