ಬೈಂದೂರು, ಫೆ 01 : ಸಾಕಷ್ಟು ಕುತೂಹಲ ಕೆರಳಿಸಿರುವ ಬೈಂದೂರು ತಾಲೂಕು ಶೀಘ್ರದಲ್ಲಿಯೇ ಕಾರ್ಯಾರಂಭವಾಗುವುದು ಖಚಿತವಾಗಿದ್ದು, ರಾಜ್ಯ ಸರ್ಕಾರ ಜ.27ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ. 2017 ಡಿಸೆಂಬರ್ 16ರಂದು ಗೆಜೆಟ್ ನೋಟಿಫಿಕೇಶನ್ ಹೊರಡಿಸಿ, ಆಕ್ಷೇಪ ಹಾಗೂ ಸಲಹೆ ಸೂಚನೆಗಳನ್ನು ನೀಡಲು 30 ದಿನಗಳ ಕಾಲಾವಕಾಶ ನೀಡಿತ್ತು. ಸಾರ್ವಜನಿಕ ಸಲಹೆ ಸೂಚನೆಗಳನ್ನು ಪರಿಶೀಲಿಸಿ ಜ.27ರಂದು ಬೈಂದೂರು ತಾಲೂಕಿಗೆ 26 ಗ್ರಾಮಗಳ ವ್ಯಾಪ್ತಿಯನ್ನು ಸೇರಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ.
.
ಸರ್ಕಾರದ ಅಧಿಸೂಚನೆಯ ಪ್ರಕಾರ ಬೈಂದೂರು ಹೋಬಳಿಯ ವ್ಯಾಪ್ತಿಯ 1.ಶಿರೂರು, 2.ಪಡುವರಿ, 3.ಯಡ್ತರೆ, 4.ಬೈಂದೂರು, 5.ತಗ್ಗರ್ಸೆ, 6.ಉಪ್ಪುಂದ, 7.ಬಿಜೂರು, 8.ನಂದನವನ, 9.ಕೆರ್ಗಾಲು,10.ಕಿರಿಮಂಜೇಶ್ವರ, 11. ಉಳ್ಳೂರು, 12.ಕಂಬದಕೋಣೆ, 13.ಹೇರಂಜಾಲು, 14.ನಾವುಂದ, 15.ಬಡಾಕೆರೆ, 16.ಮರವಂತೆ, 17.ಹಡವು, 18.ನಾಡ, 19.ಹೇರೂರು,20.ಕಾಲ್ತೋಡು, 21.ಗೋಳಿಹೊಳೆ, 22.ಯಳಜಿತ್, 23.ಕೊಲ್ಲೂರು, 24.ಜಡ್ಕಲ್, 25.ಮುದೂರು, 26.ಹಳ್ಳಿಹೊಳೆ ಗ್ರಾಮಗಳು ನೂತನ ಬೈಂದೂರು ತಾಲೂಕಿಗೆ ಸೇರುತ್ತವೆ.
ಈ ಹಿಂದೆ ಅಧಿಸೂಚನೆಯಲ್ಲಿ ಕಮಲಶಿಲೆ ಹಾಗೂ ಸೇನಾಪುರ ಗ್ರಾಮಗಳನ್ನು ಬೈಂದೂರು ತಾಲೂಕಿನಲ್ಲಿ ಕಾಣಿಸಿತ್ತು. ಆ ನಂತರ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಕಮಲಶಿಲೆ ಹಾಗೂ ಸೇನಾಪುರ ಗ್ರಾಮವನ್ನು ಕುಂದಾಪುರದಲ್ಲಿಯೇ ಉಳಿಸಿ ಅಧಿಸೂಚನೆ ಹೊರಡಿಸಿದೆ. ಇದರಿಂದ ಬೈಂದೂರು ತಾಲೂಕು ಕಾರ್ಯಾರಂಭ ಮಾಡುವುದು ಖಚಿತವಾಗಿದೆ.
ಹಳ್ಳಿಹೊಳೆಗೆ ಮತ್ತೆ ನಿರಾಸೆ
ಹಳ್ಳಿಹೊಳೆ ಗ್ರಾಮವನ್ನು ಕುಂದಾಪುರ ತಾಲೂಕಿಗೆ ಸೇರ್ಪಡೆ ಮಾಡಬೇಕು ಎನ್ನುವ ನೆಲೆಯಲ್ಲಿ ಒಂದು ತಿಂಗಳಲ್ಲಿ ಸಾಕಷ್ಟು ಹೋರಾಟಗಳು ನಡೆದಿದ್ದವು. ಆದರೆ ಹಳ್ಳಿಹೊಳೆ ಗ್ರಾಮವನ್ನು ಬೈಂದೂರು ತಾಲೂಕಿಗೇ ಮತ್ತೆ ಸೇರಿಸಿ ಅಧಿಸೂಚನೆ ಹೊರಡಿಸಿರುವುದು ಆ ಭಾಗದ ಜನರಿಗೆ ನಿರಾಸೆ ತಂದಿದೆ. ಈ ಬಗ್ಗೆ ಕಾನೂನಾತ್ಮಕವಾದ ಹೋರಾಟಕ್ಕೆ ಸಿದ್ಧತೆ ನಡೆಸುವುದಾಗಿ ಆ ಭಾಗದ ಜನರು ತಿಳಿಸುತ್ತಾರೆ. ಈಗ ಹಳ್ಳಿಹೊಳೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಮಲಶಿಲೆ ಗ್ರಾಮವಿದ್ದು ಮುಂದೆ ಒಂದೇ ಗ್ರಾ.ಪಂ.ನ ಗ್ರಾಮಗಳು ಎರಡು ತಾಲೂಕಿಗೆ ಸೇರುತ್ತದೆ ಹೀಗೆ ಹಲವು ಆಡಳಿತಾತ್ಮಕ ವಿಚಾರಗಳು ಇಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.