ಮಂಗಳೂರು, ಫೆ 01 : ಭಾರತಿ ಡಿಫೆನ್ಸ್ ಆಂಡ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿಡಿಐಎಲ್ ) ಸಂಸ್ಥೆಯು, ಮಂಗಳೂರು ಯಾರ್ಡ್ ನಲ್ಲಿ ಇಂಟರ್ ಸೆಪ್ಟರ್ ಬೋಟನ್ನು ಬುಧವಾರ ಕೋಸ್ಟ್ ಗಾರ್ಡ್ ಗೆ ಹಸ್ತಾಂತರಿಸಿತು.. ಹೀಗಾಗಿ ಮಂಗಳೂರು
ಕರಾವಳಿ ತಟ ರಕ್ಷಣಾ ಪಡೆಗೆ ಮತ್ತೊಂದು ಗಸ್ತು ನೌಕೆ ಸೇರ್ಪಡೆಗೊಂಡಂತಾಗಿದೆ. ತಣ್ಣೀರುಬಾವಿ ಬಳಿ ಕರಾವಳಿ ತಟ ರಕ್ಷಣಾ ಪಡೆ ನೌಕೆ ವಿ- 410 ನ್ನು ನೀರಿಗಿಳಿಸಲಾಯಿತು.
ಕರಾವಳಿ ತಟ ರಕ್ಷಣಾ ಪಡೆಯ ಅಧಿಕಾರಿ ಪವನ್ ಕೋಯರ್ ಅವರ ಪತ್ನಿ ಶಿಲ್ಪಾ ಕೋಯರ್ ನೂತನ ಗಸ್ತು ನೌಕೆಗೆ ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟನೆ ನೆರವೇರಿಸಿದರು. ಬಳಿಕ ಬೃಹತ್ತಾದ ಕ್ರೇನ್ ಸಹಾಯದಿಂದ ನೌಕೆ ವಿ- ೪೧೦ನ್ನು ನೀರಿಗಿಳಿಸಲಾಯಿತು. ಹಣಕಾಸಿನ ತೊಂದರೆಯಿಂದಾಗಿ ನೌಕೆ ನಿರ್ಮಾಣದಲ್ಲಿ ವಿಳಂಬವಾಗಿದ್ದು, ಈ ಹಿಂದೆ ಕಂಪನಿಯು 250 ನೌಕೆಗಳನ್ನು ಭಾರತೀಯ ಮತ್ತು ವಿದೇಶಿ ಗ್ರಾಹಕರಿಗೆ ನಿರ್ಮಾಣ ಮಾಡಿ ನೀಡಿದೆ.
ಇದು ಸಮುದ್ರದಲ್ಲಿ ಕಳ್ಳ ಸಾಗಾಟ, ಕಡಲ್ಗಳ್ಳತನ ಕಾರ್ಯಾಚರಣೆ ಮತ್ತು ಮೀನುಗಾರರ ರಕ್ಷಣೆ ಮತ್ತು ಮೇಲ್ವಿಚಾರಣೆಯ ಕಾರ್ಯವನ್ನು ನಡೆಸಲಿದೆ. ಕೊನೆಯ ಹಂತದ ತಪಾಸಣೆಯ ಬಳಿಕ ಫೆ.20 ರಿಂದ ಈ ಬೋಟು ಸಮುದ್ರದಲ್ಲಿ ಕಣ್ಗಾವಲು ನಿರತವಾಗಿದೆ. ಎರಡು ಪ್ರಬಲ ಇಂಜಿನ್ ಗಳನ್ನು ಬೋಟ್ ಒಳಗೊಂಡಿದ್ದು ಅಲ್ಯೂಮಿನಿಯಂ ಹಲ್ ನಿಂದ ತಯಾರಿಸಲಾಗಿದೆ. 28 ಮೀಟರ್ ಉದ್ದ 60 ಟನ್ ಭಾರವಿದ್ದು 11 ಸಿಬ್ಬಂದಿ ಗಸ್ತು ವಾಹನದಲ್ಲಿ ಕಾರ್ಯ ನಿರ್ವಹಿಸಬಹುದಾಗಿದೆ.