ಗುಂಡ್ಯ, ಜ 31: ಶಿರಾಡಿ ಘಾಟ್ ಹೆದ್ದಾರಿ ಅಗಲೀಕರಣಕ್ಕಾಗಿ ಬಂದ್ ಆಗಿರೋದ್ರಿಂದ ಆ ಭಾಗದ ಕೆಲವು ಊರುಗಳ ಜನರು ತಾತ್ಕಾಲಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಇಲ್ಲಿಯವರೆಗೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ನೂರಾರು ಬಸ್ಸುಗಳು ಈ ಭಾಗದ ಜನರಿಗೆ ನೆರವಾಗುತ್ತಿತ್ತು. ಅಂದರೆ ಮಂಗಳೂರಿನ ಕಡೆಗೆ ಅಥವಾ ಗುಂಡ್ಯ ಕಡೆಗೆ ಹೋಗುವವರು ಈ ಬಸ್ಸುಗಳನ್ನೇ ಅವಲಂಬಿಸುತ್ತಿದ್ದರು. ಆದರೆ ಇದೀಗ ಎಲ್ಲಾ ಬಸ್ಗಳೂ ಪಥ ಬದಲಿಸಿದ ಹಿನ್ನೆಲೆಯಲ್ಲಿ ಈ ಭಾಗದ ಜನರಿಗೆ ಸಾರಿಗೆ ಸಮಸ್ಯೆ ಕಾಡಿದೆ. ನೆಲ್ಯಾಡಿ, ಉದನೆ, ಶಿರಾಡಿ, ಗುಂಡ್ಯ, ಗೋಳಿತೊಟ್ಟು ಮುಂತಾದ ಭಾಗದ ಜನರಿಗೆ ಸಂಚರಿಸಲು ಇದೀಗ ವಾಹನಗಳ ಕೊರತೆ ಎದುರಾಗಿದೆ. ಇಲ್ಲಿ ಎರಡು ಖಾಸಗಿ ಬಸ್ಸುಗಳು ಇವೆಯಾದರೂ ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಸಂಚರಿಸುವುದರಿಂದ ಸ್ಥಳೀಯರಿಗೆ ಸಮಸ್ಯೆಯಾಗಿದೆ. ಉಳಿದಂತೆ ಇಲ್ಲಿ ಜೀಪುಗಳನ್ನೇ ಅವಲಂಬಿಸಬೇಕಾಗಿದ್ದು, ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದಷ್ಟು ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅವರು ಹೆದ್ದಾರಿ ಇಲಾಖೆಯನ್ನು ಆಗ್ರಹಿಸಿದ್ದಾರೆ. ಇವಿಷ್ಟೇ ಅಲ್ಲದೆ ಉಪ್ಪಿನಂಗಡಿಯಿಂದ ಗುಂಡ್ಯ ಮದ್ಯೆ ಹೆದ್ದಾರಿಯ ಎರಡೂ ಬದಿಯಲ್ಲೂ ನೂರಾರು ಅಂಗಡಿಗಳು, ಹೊಟೇಲ್ ಗಳು ಇದು ಇವೆಲ್ಲವೂ ಹೈವೆಯಲ್ಲಿ ಪ್ರಯಾಣಿಸುವವರನ್ನೇ ಅವಲಂಬಿಸಿವೆ. ಈಗ ಇವಕ್ಕೂ ಕೂಡಾ ಆರ್ಥಿಕ ಹೊಡೆತ ಬಿದ್ದಿದೆ.