ಪಡುಬಿದ್ರಿ, ಜ 31: ಪಡುಬಿದ್ರಿ ಗ್ರಾಮ ಪಂಚಾಯತ್ ನಿಂದ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆಯು ಪಡುಬಿದ್ರಿ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಗ್ರಾಮಸಭೆಗೆ ಸ್ಥಳಿಯ ಹಲವಾರು ಶಾಲೆಗಳಿಂದ ಮಕ್ಕಳು ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಅದ್ಯಕ್ಷೆ ದಮಯಂತಿ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯತ್ ಅಧಿಕಾರಿ ಪಂಚಾಕ್ಷರಿ,ಪಂಚಾಯತ್ ಸದಸ್ಯರು ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರು ಇದ್ದರು. ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಮಾತನಾಡಿ ಸರಕಾರದ ಸುತ್ತೋಲೆಯಂತೆ ಮಾಡುವ ಈ ಸಭೆಯಲ್ಲಿ ಮಕ್ಕಳು ಅವರಿಗಾಗುವ ತೊಂದರೆ ಗಳ ಬಗ್ಗೆ ಮಾತನಾಡಿ ತಮ್ಮ ಉಳಿವು ಮತ್ತು ರಕ್ಷಣೆಯ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳ ಮೇಲಿನ ದೌರ್ಜನ್ಯ ಇತರ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ತೀರಾ ಕಡಿಮೆ. ಆದರು ಇದರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯ. ಸ್ವಚ್ಛಭಾರತ್ ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಹೆತ್ತವರಿಗೆ ತಿಳಿಸುವ ಮೂಲಕ ಕೈ ಜೊಡಿಸಬೇಕು ಎಂದರು. ಇದೇ ವೇಳೆ ಶಾಲಾ ಮಕ್ಕಳು ಕೇಳಿದ ಖಡಕ್ ಪ್ರಶ್ನೆಗಳಿಗೆ ಪಂಚಾಯತ್ ಅದ್ಯಕ್ಷೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮಜಾಯಿಷಿ ಉತ್ತರ ನೀಡಿದರು.