ಕುಂದಾಪುರ, ಜ 31: ಫೆ.2ರಂದು ಬಿಜೆಪಿ ರಾಜ್ಯಕಚೇರಿಯಲ್ಲಿ ಸಂಜೆ ನಾಲ್ಕು ಗಂಟೆಗೆ ನಡೆಯುವ ಸರಳ ಸಮಾರಂಭದಲ್ಲಿ ಬಿಜೆಪಿಯನ್ನ ಸೇರಲಿದ್ದೇನೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು. ಅವರು ಹಾಲಾಡಿಯ ತಮ್ಮ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಮಂಗಳವಾರ ನಾನು ರಾಣಿಬೆನ್ನೂರಿನಲ್ಲಿ ಸಭಾಪತಿಗಳಾದ ಕೋಳಿವಾಡರನ್ನ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದೇನೆ. ಅಲ್ಲೇ ಅವರು ಅದನ್ನ ಅಂಗೀಕರಿಸಿದ್ದಾರೆ. ಈಗ ನನಗಿರುವ ತಾಂತ್ರಿಕ ಸಮಸ್ಯೆ ನಿವಾರಣೆಗೊಂಡಿದೆ. ಹಾಗಾಗಿ ನಾನು ಬಿಜೆಪಿಯನ್ನ ಸೇರಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ತಮ್ಮ ಮುಂದಿನ ನಡೆ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರುತ್ತಿದ್ದೇನೆ. ಏನು ಜವಬ್ದಾರಿ ನೀಡುತ್ತಾರೋ ಅದನ್ನ ಸೂಕ್ತವಾಗಿ ನಿರ್ವಹಿಸುತ್ತೇನೆ ಎಂದರು.
ಕುಂದಾಪುರ ಬಿಜೆಪಿಯಲ್ಲಿನ ಭಿನ್ನಮತದ ಕುರಿತು ಪ್ರಶ್ನಿಸಿದಾಗ ಭಿನ್ನಮತಕ್ಕೆ ನಾನು ಕಾರಣನಲ್ಲ. ಆದರೆ ಇರುವ ಭಿನ್ನಮತವನ್ನ ಶಮನಗೊಳಿಸಲು ನಾನು ಶಕ್ತನಲ್ಲ ಅದನ್ನ ರಾಜ್ಯ ನಾಯಕರುಗಳೇ ಶಮನಗೊಳಿಸಬೇಕೆಂದರು. ಡಾ. ವಿ ಎಸ್ ಆಚಾರ್ಯರಿದ್ದಾಗ ಜಿಲ್ಲೆಯಲ್ಲಿ ಭಿನ್ನಮತವೆಂಬುದೇ ಇರಲಿಲ್ಲ. ಆದರೆ ಅವರ ಕಾಲಾನಂತರ ಬಿಜೆಪಿಯಲ್ಲಿ ಭಿನ್ನಮತ ಸಂಸ್ಕೃತಿ ಹುಟ್ಟುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ತಮ್ಮ ವಿರುದ್ಧ ವಾಟ್ಸಪ್ ಮತ್ತು ಫೇಸಬುಕ್ಗಳಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿರುವ ಕುರಿತು ಮಾತನಾಡಿದ ಅವರು ಅದು ಪಕ್ಷಕ್ಕೆ ಬಿಟ್ಟ ವಿಚಾರ ಬರೆಯುವವರ ವಿರುದ್ಧ ಪಕ್ಷದ ಹಿರಿಯ ಮುಖಂಡರು ಕ್ರಮ ಕೈಗೊಳ್ಳುತ್ತಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ ಹಾಲಾಡಿಯವರನ್ನ ಶೂನ್ಯ ಸಾಧನೆ ಮಾಡಿದ ಶಾಸಕ ಎಂದು ಲೇವಡಿ ಮಾಡಿರುವುದನ್ನ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ ಯಾವ ರೀತಿಯಲ್ಲಿ ಶೂನ್ಯ ಸಾಧನೆ ಎಂದು ತೋರಿಸಿ ಕೊಡಿ ಎಂದು ಸವಾಲು ಹಾಕಿದರು. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಶೇ.90ರಷ್ಟು ಪ್ರಮುಖ ರಸ್ತೆಗಳು ದುರಸ್ತಿಗೊಂಡಿದೆ. ಶಾಲೆಗಳಿಗೆ ಕಾಲೇಜುಗಳಿಗೆ ಬೇಕಾದ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ ಯಾವ ರೀತಿ ಶೂನ್ಯ ಸಾಧನೆ. ಶೂನ್ಯ ಅಂದರೆ ಸೊನ್ನೆ ಏನೂ ಅಭಿವೃದ್ಧಿಯಾಗದಿದ್ದರೆ ಮಾತ್ರ ಶೂನ್ಯ ಸಾಧನೆಯಾಗುತ್ತದೆ ಎಂದರು.