ಬೆಂಗಳೂರು, ಜ 31 : ಗಾಂಜಾ ದಾಸ್ತಾನು ನೆಪದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಹಣ ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಪೇದೆ ಸೇರಿದಂತೆ ನಾಲ್ವರನ್ನು ಸದಾಶಿವ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಜ್ಯ ಗುಪ್ತಚರ ಇಲಾಖೆಯ ವಿಐಪಿ ವಿಭಾಗದ ಬುಲೆಟ್ ಪ್ರೂಫ್ ವಾಹನದ ಚಾಲಕ ಬಾಬು, ಗೌತಮಪುರದ ಎಸ್.ಪೂವಾ, ದೀನಬಂಧು ನಗರದ ಗೋಪಿನಾಥ್ , ಲಕ್ಷ್ಮೀಪುರದ ಸೇಲ್ವಂ ಎಂದು ಗುರುತಿಸಲಾಗಿದೆ.
ಜ. 20 ರಂದು ಕೊಡಿಗೇಹಳ್ಳಿಯ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಅಮಿತ್ ಹಾಗೂ ಆತನ ಸ್ನೇಹಿತರು ತಂಗಿದ್ದ ರೂಂಗೆ ತಡರಾತ್ರಿ ದಾಳಿ ಮಾಡಿದ ಆರೋಪಿಗಳಾದ ಗುಪ್ತಚರ ಇಲಾಖೆಯ ಮುಖ್ಯ ಪೇದೆ, ಹಾಗೂ ಇತರ ಆತನ ಸ್ನೇಹಿತರು ವಿದ್ಯಾರ್ಥಿಗಳ ಮನೆಯಲ್ಲಿದ್ದ 200 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದರು. ಮತ್ತು ವಿದ್ಯಾರ್ಥಿ ಹಾಗೂ ಗಾಂಜಾ ಮಾರಾಟಗಾರ ನೌಶಿನ್ ನನ್ನು ವಸಕ್ಕೆ ಪಡೆದು ಬೆದರಿಸಿ 3 ಲಕ್ಷ ಕೊಡುವುದಾದರೆ ಕೇಸು ದಾಖಲಿಸುವುದಿಲ್ಲ ಎಂದಿದ್ದಾರೆ. ಹೆದರಿದ ವಿದ್ಯಾರ್ಥಿಗಳು ಕೊನೆಗೆ 50 ಸಾವಿರ ಕೊಡುವುದಾಗಿ ಹೇಳಿ 15,000 ಮುಂಗಡ ಪಾವತಿ ಮಾಡಿದ್ದಾರೆ. ಉಳಿದ ಹಣ ವಸೂಲಿ ಮಾಡಲೆಂದು ಮತ್ತೇ ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರಿಗೆ ಕರೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ತಾವೇ ತಂದ ಆಟೋದಲ್ಲಿ ಕುಳ್ಳಿರಿಸಿ ಹಲ್ಲೆ ಮಾಡಿದ್ದಾರೆ. ಆಗ ಹೆದರಿದ ವಿದ್ಯಾರ್ಥಿಗಳು ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ರಕ್ಷಣೆಗೆ ಧಾವಿಸಿದ ರಾತ್ರಿ ಗಸ್ತಿನಲ್ಲಿದ್ದ ಪೇದೆಗಳು ಬಂದು ವಿದ್ಯಾರ್ಥಿಗಳನ್ನು ಹಾಗೂ ಆರೋಪಿ ಪೊಲೀಸರನ್ನು ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ ರಾಜ್ಯ ಗುಪ್ತಚರ ಇಲಾಖೆಯ ಸಿಬ್ಬಂದಿಗಳಿಗೆ ದಾಳಿ ಮಾಡುವ ಯಾವುದೇ ಅಧಿಕಾರ ಇಲ್ಲದಿದ್ದರೂ ದಾಳಿ ನಡೆಸಿದ್ದಾರೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಗಾಂಜಾ ಮಾರಾಟದ ಆರೋಪದ ಮೇಲೆ ದಂಧೆಕೋರ ನೌಶಿನ್ ಹಾಗೂ ಸಹಚರರನ್ನು ಬಂಧಿಸಲಾಗಿದೆ.