ಕುಂದಾಪುರ, ಸೆ17: ಗಂಗೊಳ್ಳಿ ಬಂದರು ದಕ್ಕೆಯಲ್ಲಿ ನಿಲ್ಲಿಸಿದ್ದ ಬೋಟ್ನಲ್ಲಿ ಇಬ್ಬರ ನಡುವೆ ವಾಕ್ಸಮರ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ತೆಕ್ಕಟ್ಟೆಯ ನಿವಾಸಿ ಪ್ರಕಾಶ್ ಪೂಜಾರಿ ಹಲ್ಲೆಗೊಳಗಾಗಿ ಮೃತಪಟ್ಟಿರುವ ವ್ಯಕ್ತಿ.
ಗಣೇಶ್ ಖಾರ್ವಿ ಅವರಿಗೆ ಸೇರಿದ ಮೀನುಗಾರಿಕ ಬೋಟ್ ನಲ್ಲಿ ಪ್ರಕಾಶ್ ಪೂಜಾರಿ ಕೆಲಸ ನಿರ್ವಹಿಸುತ್ತಿದ್ದ. ಕ್ಷುಲ್ಲಕ ಕಾರಣಕ್ಕೆ ಪ್ರಕಾಶ್ ಪೂಜಾರಿ ಮತ್ತು ಎಸ್ಎಂಪಿ ಬೋಟ್ನ ಚಾಲಕ ಚಂದ್ರಕಾಂತ ಎಂಬವರ ನಡುವೆ ಮಾತಿನ ಚಕಮಕಿ ನಡೆದಿದೆ. ಎಸ್ಎಂಪಿ ಬೋಟ್ ಗೆ ತಮ್ಮ ಬೋಟ್ ನ ಹಗ್ಗ ಕಟ್ಟಿದ ವಿಚಾರವಾಗಿ ಪ್ರಕಾಶ್ ಪೂಜಾರಿ ಮತ್ತು ಚಂದ್ರಕಾಂತ್ ನಡುವೆ ಜಟಾಪಟಿ ನಡೆದಿದ್ದು, ಬೋಟ್ನಲ್ಲಿದ್ದ ಹಲಗೆ ತುಂಡಿನಿಂದ ಚಂದ್ರಕಾಂತ ಬಲವಾಗಿ ಹೊಡೆದಾಗ ನಿಯಂತ್ರಣ ತಪ್ಪಿದ ಪ್ರಕಾಶ್ ಮಗುಚಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಶನಿವಾರ ಸಂಜೆ ಪ್ರಕಾಶ್ ಮೃತದೇಹ ಗಂಗೊಳ್ಳಿ ಬಳಿಯ ಹತ್ತಿರದ ಬೇಲಿಕೇರಿ ಸಮುದ್ರದಲ್ಲಿ ಪತ್ತೆಯಾಗಿದ್ದು, ಬೋಟ್ನಲ್ಲಿದ್ದ ಸೂರ್ಯ ಪೂಜಾರಿ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಉತ್ತರ ಕನ್ನಡ ಮೂಲದ ಭಟ್ಕಳ ನಿವಾಸಿ ಚಂದ್ರಕಾಂತನ ವಿರುದ್ದ ಗಂಗೊಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಚಂದ್ರಕಾಂತನನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.