ಬೈಂದೂರು, ಜ 14 (Daijiworld News/MSP): ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್, ವರ್ಲ್ಡ್ಕಪ್ ಗೆದ್ದ ಭಾರತ ತಂಡದ ಸದಸ್ಯ ಎಸ್. ಶ್ರೀಶಾಂತ್ ಬೈಂದೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಕೊಲ್ಲೂರು ಸಮೀಪದ ಹಾಲ್ಕಲ್ ಎಂಬಲ್ಲಿ ಜಾಗತಿಕ ಮಟ್ಟದ ಕ್ರೀಡಾ ಅಕಾಡಮಿ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಇಲ್ಲಿನ ರುಪೀ ಮಾಲ್ನಲ್ಲಿ ಮಂಗಳವಾರ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಅವರು ಇದನ್ನು ಪ್ರಕಟಿಸಿದರು.
ಸದ್ಯ ಅಲ್ಲಿನ 16 ಎಕ್ರೆ ಸ್ಥಳದಲ್ಲಿ ತಲೆಯೆತ್ತುತ್ತಿರುವ ಶ್ರೀಶಾಂತ್ ಸ್ಪೋರ್ಟ್ಸ್ ಅಕಾಡೆಮಿಯು ಕ್ರಿಕೆಟ್ ಜತೆಗೆ ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್ ಮತ್ತು ಅಥ್ಲೆಟಿಕ್ಸ್ಗಳಲ್ಲಿ ಸಾಮರ್ಥ್ಯ ತೋರಬಲ್ಲ ಪ್ರತಿಭಾನ್ವಿತರನ್ನು ಗುರುತಿಸಿ ತರಬೇತಿ, ಪ್ರೋತ್ಸಾಹ ನೀಡುವ ಗುರಿ ಹೊಂದಿದೆ. ಆ ಮೂಲಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ರೂಪಿಸಲಿದೆ ಎಂದು ಅವರು ಹೇಳಿದರು.
ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು, ಎಲ್ಲ ಎಣಿಕೆಯಂತೆ ನಡೆದರೆ ಇದೇ ವರ್ಷ ನವಂಬರ್ ೭ರಂದು ಕಾರ್ಯಾರಂಭ ಮಾಡಲಿದೆ. ಇಲ್ಲಿ ಅತ್ಯಂತ ಪರಿಣಾಮಕಾರಿಯಾದ ವಸತಿ ಸಹಿತವಾದ ತರಬೇತಿ ನೀಡಲಾಗುವುದು. ಅದು ಟೂರ್ನಮೆಂಟ್, ವನ್ ಟು ವನ್ ತರಬೇತಿ ಒಳಗೊಳ್ಳಲಿದೆ. ಈಗಾಗಲೇ ಪ್ರತೀ ವಿಭಾಗದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ಸಮಪರ್ಕಿಸಿದ್ದು, ಅವರು ಅಕಾಡೆಮಿಯಯ ಚಟುವಟಿಕೆಗಳಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ್ದಾರೆ.
ಆರಂಭದಲ್ಲಿ ರಜಾ ಅವಧಿಯ 3, 6, 9 ಮತ್ತು 36 ದಿನಗಳ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ವಿವಿಧ ಕ್ರೀಡಾಕ್ಷೇತ್ರದ ಪರಿಣತರ ಹಾಗೂ ಗಣ್ಯರ ಸಲಹೆಯಂತೆ ಫಿಟ್ನೆಸ್ ಮತ್ತು ಡಯಟ್ಗೆ ಆದ್ಯತೆ ನೀಡಲಾಗುವುದು. ಅಕಾಡೆಮಿಯ ಭಾಗವಾಗಲಿರುವ ಅಧ್ಯಾತ್ಮ ಕೇಂದ್ರದಲ್ಲಿ ಫಿಟ್ನೆಸ್, ಯೋಗ, ಧ್ಯಾನ, ಆಯುರ್ವೇದದ ಜತೆಗೆ ಭಾರತೀಯ ಸಂಸ್ಕೃತಿ, ಮೌಲ್ಯ ಮತ್ತು ಜೀವನ ಪದ್ಧತಿಯನ್ನು ರೂಢಿಗೆ ತರಲಾಗುವುದು ಎಂದು ಅಕಾಡೆಮಿಯ ಚಟುವಟಿಕೆಗಳನ್ನು ಅವರು ವಿವರಿಸಿದರು.
ಎಲ್ಲ ವಿಭಾಗಗಳ ಕ್ರೀಡಾ ಒಳಾಂಗಣ ಇಲ್ಲಿ ಇರುತ್ತವೆ. ಎಲ್ಲ ಕ್ರೀಡೆಗಳ ಪಂದ್ಯಾಟ ಆಯೋಜಿಸಿ ದೊಡ್ಡ ಮೊತ್ತದ ನಗದು ಬಹುಮಾನ ನೀಡುವ ಯೋಚನೆ ಇದೆ. ಶ್ರೀಶಾಂತ್ ಸ್ಪೋರ್ಟ್ಸ್ ಅಕಾಡೆಮಿಯ ಕಾರ್ಪೊರೇಟ್ ಕಚೇರಿ ಬೈಂದೂರಿನ ರುಪೀ ಮಾಲ್ನಲ್ಲಿ ಇರುತ್ತದೆ. ಇಲ್ಲಿನ ಉದ್ಯಮಿ ಕೆ. ವೆಂಕಟೇಶ ಕಿಣಿ, ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿರುವ ರುಪೀ ಮಾಲ್ ಹಾಗೂ ಆರ್ಎಸ್ ವೆಂಚರ್ನ ಪ್ರವರ್ತಕ ರಾಜೀವ್ಕುಮಾರ್ ಅಕಾಡೆಮಿಯ ಯೋಜನೆಯಲ್ಲಿ ತಮ್ಮೊಂದಿಗಿರುತ್ತಾರೆ ಎಂದು ಶ್ರೀಶಾಂತ್ ನುಡಿದರು. ತರಬೇತಿ ಉಚಿತ ಅಲ್ಲ ಎಂದ ಅವರು ಬಡವರಾಗಿದ್ದು, ಅರ್ಹರೆನಿಸುವ ಕೆಲವರಿಗೆ ಉಚಿತ ತರಬೇತಿ ನೀಡಲಾಗುವುದು ಎಂದರು. ಪಾಲುದಾರರಾದ ಕೆ. ವೆಂಕಟೇಶ ಕಿಣಿ, ರಾಜೀವಕುಮಾರ್, ಸಾಜು ಕಡವಿಲ ಇದ್ದರು.
ಈ ಯೋಜನೆಗೆ ಕೊಲ್ಲೂರನ್ನು ಆಯ್ದುಕೊಂಡ ಬಗ್ಗೆ ಪ್ರಶ್ನಿಸಿದಾಗ ತಾವು ಮೂಕಾಂಬಿಕೆಯ ಆರಾಧಕ. ಇಲ್ಲಿಗೆ ದೇಶದೆಲ್ಲೆಡೆಯ ಯಾತ್ರಿಗಳು ಬರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಪ್ರಕೃತಿ ಸೌಂದರ್ಯ, ಶುದ್ಧ ವಾತಾವರಣ ತಾವು ಉದ್ದೇಶಿಸಿದ ಸ್ವರೂಪದ ಅಕಾಡೆಮಿಗೆ ಸೂಕ್ತವಾಗಿದೆ. ಇದು ಕಾರ್ಯಾರಂಭವಾದ ಅನತಿ ಕಾಲದಲ್ಲಿ ಜಾಗತಿಕ ಕ್ರೀಡಾ ಪ್ರಪಂಚದ ಗಮನ ಸೆಳೆದು, ಎಲ್ಲೆಡೆಯಿಂದ ಬರುವ ಕ್ರೀಡಾಳುಗಳನ್ನು ತರಬೇತಿಗೊಳಿಸಲಿದೆ ಎಂದು ಶ್ರೀಶಾಂತ್ ಹೇಳಿದರು.