ಮಂಗಳೂರು, ಜ 13 (Daijiworld News/MSP): ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ರೂಪಿಸಿರುವ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮಗಳಲ್ಲಿ ನಿಗದಿ ಪಡಿಸಿರುವ ಗುರಿಯನ್ನು ನೂರಕ್ಕೆ ನೂರರಷ್ಟು ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಹೇಳಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಧಾನಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಜಿಲ್ಲೆಯಲ್ಲಿ ಆನ್ಲೈನ್ ಮೂಲಕ ಸ್ವೀಕರಿಸಿದ ಒಟ್ಟು 10077 ಅರ್ಜಿಗಳನ್ನು ಪರಿಶೀಲಿಸಿ, ನೋಂದಾವಣೆ ಮಾಡುವ ಕಾರ್ಯ ನಡೆಯುತ್ತಿದ್ದು, ನವೆಂಬರ್ ಅಂತ್ಯದೊಳಗೆ ಸಿದ್ಧಪಡಿಸಿ ಆಯ್ಕೆ ಸಮಿತಿಯಲ್ಲಿ ಮಂಡಿಸಲಾಗುವುದು ಎಂದು ನಿಗಮದ ಅಧಿಕಾರಿಗಳು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಮಶಾನ ಖಬರಸ್ಥಾನ ಜಮೀನು ಮಂಜೂರಾತಿಗೆ ಸಲ್ಲಿಸಿದ ಅರ್ಜಿಗಳಲ್ಲಿ ಮಂಜೂರುಗೊಂಡ 2 ಆಸ್ತಿಗಳ ವಿವರ ಸಂಪೂರ್ಣಗೊಂಡಿದ್ದು, 12 ಪ್ರಸ್ತಾವನೆ ಬಾಕಿ ಉಳಿದಿದೆ. ಶೈಕ್ಷಣಿಕ ಸೌಲಭ್ಯ ಉನ್ನತೀಕರಣ, ಅಲ್ಪಸಂಖ್ಯಾತರ ಆರ್ಥಿಕ ಚಟುವಟಿಕೆಗಳಲ್ಲಿ ಹಾಗೂ ಉದ್ಯೋಗಳಲ್ಲಿ ಸಮಾನತೆ, ಅಲ್ಪಸಂಖ್ಯಾತರ ಜೀವನಾಂಶ ಸುಧಾರಣೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಸಭೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಾಕಷ್ಟು ಪ್ರಸ್ತಾವನೆಗಳು ಬಾಕಿ ಇದೆ ಇದರ ಬಗ್ಗೆ ನಿಗ ವಹಿಸಿ ಕೆಲಸ ಮಾಡಿ ಎಂದು ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು. ಅಲ್ಪಸಂಖ್ಯಾತರಿಗೆ ಸಿಗಬೇಕಾದ ಸೌಲಭ್ಯ ತಲುಪಿದಾಗ ಮಾತ್ರ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರಾದ ಜಾಸ್ಟಿನ್ ಡಿಸೋಜಾ, ಪದ್ಮ ಪ್ರಸಾದ್ ಜೈನ್, ರಾಜ್ಯ ಮಟ್ಟದ ಪ್ರಧಾನಮಂತ್ರಿಗಳ ಕಾರ್ಯಕ್ರಮ ಅನುಷ್ಟಾನ ಸಮಿತಿ ನಾಮ ನಿರ್ದೇಶಿತ ಸದಸ್ಯ ಸುರೇಶ್ ಜೈನ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಕ್ಷ್ ಇಲಾಖೆ, ಕಾರ್ಮಿಕ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ಎಲ್ಲ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.