ಕಡಬ, ಜ 13 (Daijiworld News/MSP): ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸುಬ್ರಹ್ಮಣ್ಯ ಘಟಕ ಇದರ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರ ಸಂಹಿತೆ ಕಡ್ಡಾಯ ಮಾಡಬೇಕಾಗಿ ಕುಕ್ಕೆ ಸುಬ್ರಹ್ಮಣ್ಯದ ದೇವಳದ ಕಾರ್ಯನಿರ್ವಾಹಣಾ ಅಧಿಕಾರಿಗಳ ಮೂಲಕ ಮನವಿ ಮಾಡಲಾಯಿತು.
ದೇಶದ ನಾನಾ ಭಾಗಗಳಿಂದ ಪ್ರಸಿದ್ದ ನಾಗರಾಧನೆಯ ಕ್ಷೇತ್ರವಾಗಿರುವ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ದರ್ಶನಕ್ಕಾಗಿ ಭಕ್ತಾಧಿಗಳು ಆಗಮಿಸುತ್ತಾರೆ. ಆದರೆ ಇತ್ತೀಚೆಗೆ ಭಕ್ತಾದಿಗಳು ಯಾವುದೇ ವಸ್ತ್ರ ಸಂಹಿತೆ ಇಲ್ಲದೆ ಆಗಮಿಸುತ್ತಾರೆ, ಇದೊಂದು ಧಾರ್ಮಿಕ ಶ್ರದ್ಧಾಕೇಂದ್ರವಾಗಿದ್ದು, ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನಕ್ಕೆ ಪ್ರವೇಶಿಸುವ ಪ್ರತಿಯೊಬ್ಬ ಭಕ್ತನೂ ಹಿಂದೂ ಸಂಸ್ಕೃತಿಕ ಉಡುಗೆ ತೊಡುಗೆಗಳನ್ನು ಧರಿಸಿ ಆಗಮಿಸುವುದು ಪದ್ದತಿಯಾಗಿದ್ದು, ಪ್ರಸ್ತುತ ಶ್ರೀ ದೇವಳದಲ್ಲಿ ಯಾವುದೇ ವಸ್ತ್ರಸಂಹಿತೆ ಇಲ್ಲದೇ ಇರುವುದರಿಂದ ಉಳಿದ ಭಕ್ತಿಭಾವದಿಂದ ಬರುವ ಭಕ್ತಾದಿಗಳು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ವಸ್ತ್ರಸಂಹಿತೆ ಕಡ್ಡಾಯ ಮಾಡಬೇಕು ಎಂದು ಮನವಿಯಲ್ಲಿ ವಿನಂತಿಕೊಂಡಿದ್ದಾರೆ.
ಈ ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಸುಬ್ರಹ್ಮಣ್ಯ ಘಟಕದ ಅಧ್ಯಕ್ಷ ಅಶೋಕ್ ಅರ್ಚಾಯ, ಬಜರಂಗದಳದ ಸಂಚಾಲಕ ದಿವಿನ್ ಭಟ್, ಪ್ರಮುಖರಾದ ಕಿರಣ್ ಪೈಲಾಜೆ, ಮಣಿಕಂಠ ಆದಿಸುಬ್ರಹ್ಮಣ್ಯ, ಅಜಯ್ ಮೊದಲಾದವರು ಉಪಸ್ಥಿತರಿದ್ದರು.