ಮಂಗಳೂರು, ಜ 11(Daijiworld News/MSP): ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರ ಸ್ವಾಮಿ ನಿನ್ನೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವ ಮಂಗಳೂರು ಗಲಭೆ ಕುರಿತಾದ ವಿಡಿಯೋಗಳಿಗೆ ಮಂಗಳೂರು ನಗರ ಪೊಲೀಸ್ ಕಮಿಷನ್ ಡಾ. ಪಿ ಎಸ್ ಹರ್ಷ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರು ಗಲಭೆಯ ವಿಚಾರವಾಗಿ ಘಟನೆಯ ಕೆಲ ಆಯ್ದು ದೃಶ್ಯಗಳನ್ನು ಘಟನೆ ಮತ್ತು ಸನ್ನಿವೇಶ ಬದಲಾಯಿಸಿ ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗಿದೆ. ಈ ತುಣುಕುಗಳ ಸಮಗ್ರ ದೃಶ್ಯ ನೋಡಿದಾಗ ಸಂಪೂರ್ಣ ನೈಜ ಚಿತ್ರಣ ನೋಡಲು ಸಾಧ್ಯ. ಹಾಗಾಗಿ ತುಣುಕುಗಳ ಘಟನೆ ಮತ್ತು ಸನ್ನಿವೇಶ ಪರಿಶೀಲಿಸುವುದು ಅಗತ್ಯ ಎಂದು ಮಂಗಳೂರು ನಗರ ಪೊಲೀಸ್ ಕಮಿಷನ್ ಡಾ. ಪಿ ಎಸ್ ಹರ್ಷ ಹೇಳಿದರು.
ನಗರ ಪೊಲೀಸರು ಶಾಂತಿ, ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ದೃಶ್ಯಾವಳಿಗಳನ್ನು ಮಂಗಳೂರು ಪೊಲೀಸರು ಅಧಿಕೃತ ಫೇಸ್ಬುಕ್ನಲ್ಲಿ ಪ್ರಕಟಿಸಿದ್ದಾರೆ. ಸಾರ್ವಜನಿಕರೇ ವಿಡಿಯೋಗಳನ್ನು ನಮಗೆ ಕಳುಹಿಸಿದ್ದಾರೆ. ಇತ್ತೀಚಿಗೆ ಈ ಘಟನೆಗಳಿಗೆ ಸಂಬಂಧಿಸಿ ಆಯ್ದ ತುಣುಕುಗಳನ್ನು ಅವುಗಳ ಸೀಕ್ವೆನ್ಸ್ ಮತ್ತು ಕಾಂಟೆಕ್ಸ್ ಬದಲಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ಈ ತುಣುಕುಗಳ ಸಮಗ್ರ ಚಿತ್ರಣ ನೋಡಿದರೆ ಮಾತ್ರ ಸಂಪೂರ್ಣ ನೈಜ ಚಿತ್ರಣ ಸಿಗುತ್ತದೆ. ಸರಿಯಾದ ವಿಡಿಯೋಗಳನ್ನೇ ಪರಿಶೀಲಿಸುವುದು ಅಗತ್ಯವಾಗಿದೆ ಎಂದು ಕಮಿಷನರ್ ಹೇಳಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಹೀಗಾಗಿ ಮಂಗಳೂರು ಪೊಲೀಸ್ ತಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ಶಾಸನಬದ್ದವಾದ ತನಿಖಾ ಸಂಸ್ಥೆಗೆ ಒದಗಿಸಲಿದೆ. ಸಂಪೂರ್ಣ ತನಿಖೆ ಬಳಿಕ ಪೂರ್ಣ ಸತ್ಯ ಹೊರ ಬರಲಿದೆ ಎಂದು ಹೇಳಿದರು.