ಕುಂದಾಪುರ, ಜ 11(Daijiworld News/MSP): ಗುರುವಾರ ಸಂಜೆ ಕೊಲ್ಲೂರಿನಿಂದ ಉಡುಪಿಗೆ ಬರುತ್ತಿದ್ದ ಬಸ್ಸಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ ಪೈಕಿಪತಿ ರಾಜ್ಕುಮಾರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿಯೇ ನಿಧನ ಹೊಂದಿದ್ದು, ಆತನ ಪತ್ನಿ ಸಂಗೀತಾ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಗುರುವಾರ ತಮಿಳುನಾಡು ಮೂಲದ ಪ್ರಸ್ತುತ ಉಡುಪಿ ಅಂಬಲಪಾಡಿ ಸಮೀಪ ಟೆಂಟಿನಲ್ಲಿ ವಾಸಮಾಡುತ್ತಿರುವ ರಾಜ್ಕುಮಾರ್(35) ಹಾಗೂ ಆತನ ಪತ್ನಿ ಸಂಗೀತಾ(28) ವಿಷ ಸೇವಿಸಿದ ಬಳಿಕ ತಮ್ಮ ಒಂದೂವರೆ ವರ್ಷದ ಪುಟ್ಟ ಮಗುವಿಗೂ ವಿಷ ಕುಡಿಸಿದ್ದರು. ವಿಷದ ಅಂಶ ಬಾಲಕನ ಬಾಯಿಯಲ್ಲಿಯೂ ಇತ್ತೆನ್ನಲಾಗಿದ್ದು, ಮಗುವಿನ ಆರೋಗ್ಯ ಸಮಸ್ಥಿತಿಯಲ್ಲಿ ಇರುವುದರಿಂದ ಖಾಲಿ ಬಾಟಲಿಯನ್ನು ಮಗುವಿನ ಬಾಯಿಗೆ ಬಗ್ಗಿಸಿರಬಹುದು ಎಂದು ಅಂದಾಜಿಸಲಾಗಿದೆ.
ಕಾರ್ಕೋಟಕ ವಿಷ: ಆತ್ಮಹತ್ಯೆಗಾಗಿ ದಂಪತಿ ಸೇವಿಸಿದ ವಿಷಕ್ಕೆ ಆಂಟಿಟಾಕ್ಸಿನ್ ಇಲ್ಲ ಎನ್ನಲಾಗಿದ್ದು, ಇದನ್ನು ಅರೋಮೈನ್ ಅಥವಾ ಯೆಲ್ಲೋ ಕೌ ಡಂಗ್ ಪೌಡರ್ ಎಂದು ಕರೆಯಲಾಗುತ್ತದೆ. ಫ್ಲೋರೋಸೆಂಟ್ ಹಳದಿ ಬಣ್ಣ ಹೊಂದಿರುವ ವಾಸನೆಯಿಲ್ಲದ, ರುಚಿಯೂ ಇಲ್ಲದ ಆದರೆ ಕಾರ್ಕೋಟಕ ವಿಷವಾಗಿರು ಈ ಅರೋಮೈನ್ ದ್ರಾವಣನ್ನು ತಮಿಳುನಾಡು, ಈರೋಡ್, ಕೊಯಮುತ್ತೂರು, ತಿರಪ್ಪೂರು ಮೊದಲಾದೆಡೆ ಬಹುತೇಕ ಮಂದಿ ಆತ್ಮಹತ್ಯಗೆ ಬಳಸಿದ ಬಗ್ಗೆ ದಾಖಲೆಗಳಿವೆ, ಬಹುಷಃ ರಾಜ್ಕುಮಾರ್ ದಂಪತಿ ಈ ಹಿಂದೆಯೇ ಈ ವಿಷವನ್ನು ತಮಿಳುನಾಡಿನಿಂದ ತಂದಿದ್ದು, ಬ್ಯಾಗಿನಲ್ಲಿಟ್ಟುಕೊಂಡಿರಬೇಕು ಎಂದು ಅಂದಾಜಿಸಲಾಗಿದೆ.
ಕುಂದಾಪುರದಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಉಡುಪಿ ಅಜ್ಜರಕಾಡಿಗೆ ಸಾಗಿಸಲಾಯಿತಾದರೂ ಗಂಭೀರಗೊಂಡಿದ್ದ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ರಾಜ್ಕುಮಾರ್ ಗುರುವಾರ ರಾತ್ರಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.