ಮಂಗಳೂರು, ಜ.10 (Daijiworld News/PY) : ನಗರದ ನೆಹರೂ ಮೈದಾನದಲ್ಲಿ ಕರಾವಳಿ ಉತ್ಸವದ ಸಾಂಸ್ಕೃತಿಕ ಮೆರವಣಿಗೆಗೆ ಮುಜರಾಯಿ, ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಶುಕ್ರವಾರ ಸಂಜೆ ಚಾಲನೆ ನೀಡಿದರು.
ಉತ್ಸವದ ಪ್ರಯುಕ್ತ ವರ್ಣಮಯ ಸಾಂಸ್ಕೃತಿಕ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾತಂಡಗಳು ವೈವಿದ್ಯಮಯ ಕಲಾಪ್ರದರ್ಶನದೊಂದಿಗೆ ಪಾಲ್ಗೊಂಡವು. ಕಲಾಪ್ರದರ್ಶನದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಕಲಾತಂಡಗಳು ಹಾಗೂ ಯುವಜನ ಸಂಘಟನೆಗಳು, ವಿವಿಧ ಕಾಲೇಜಿನ ವಿದ್ಯಾರ್ಥಿ ತಂಡಗಳು ಭಾಗಿಯಾಗಿದ್ದವು.
ಮೆರಣಿಗೆಯು ನೆಹರೂ ಮೈದಾನದಿಂದ ಹೊರಟು ಕೆ.ಎಸ್ ರಾವ್ ರಸ್ತೆ, ನವಭಾರತ್ ವೃತ್ತ, ಪಿವಿಎಸ್, ಲಾಲ್ಭಾಗ್ ಮೂಲಕ ಕರಾವಳಿ ಮೈದಾನಕ್ಕೆ ತೆರಳಿತು ಜ.10 ರಿಂದ ಜ.19ರವರೆಗೆ ನಡೆಯಲಿರುವ ಕರಾವಳಿ ಉತ್ಸವದಲ್ಲಿ ನಾಡಿನ ಖ್ಯಾತ ಕಲಾವಿದರು ಹಾಗೂ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಮಾರಂಭದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ. ಜೆ. ರೂಪಾ, ಮನಪಾ ಆಯುಕ್ತ ಶಾನಾಡಿ ಅಜಿತ್ಕುಮಾರ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.