ಮಂಗಳೂರು, ಜ 10 (DaijiworldNews/SM): ಮಂಗಳೂರಿನಲ್ಲಿ ಕಳೆದ ತಿಂಗಳು ನಡೆದ ಗಲಭೆ ಪ್ರಕರಣ ಈಗಾಗಲೇ ತನಿಖಾ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ರಾಜಕಾರಣದಲ್ಲಿ ಅನುಭವ ಹೊಂದಿರುವವರು ಹಾಗೂ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವೀಡಿಯೋ ಬಿಡುಗಡೆ ಮಾಡಿರುವುದು ಸರಿಯಲ್ಲ. ಅವರು, ವೀಡಿಯೋ ಬಿಡುಗಡೆ ಮಾಡುವ ಮೂಲಕ ತನಿಖೆಯ ಹಾದಿಯನ್ನು ತಪ್ಪಿಸುವ ಯತ್ನ ಮಾಡಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ನಗರದಲ್ಲಿ ನಡೆದಿದ್ದ ಹಿಂಸಾಚಾರದ ಬಗ್ಗೆ ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ವೀಡಿಯೋ ಕುರಿತಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಜನರನ್ನು ವ್ಯವಸ್ಥೆಯ ವಿರುದ್ಧ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಈ ಹಿಂದೆ ಮೂಲ್ಕಿಯಲ್ಲಿ ಸುಖಾನಂದ ಶೆಟ್ಟಿಯವರ ಹತ್ಯೆಯಾದಗಲೂ ಗೋಲಿಬಾರ್ ನಡೆದು ಇಬ್ಬರು ಹಿಂದೂ ಕಾರ್ಯಕರ್ತರು ನಿಧನರಾಗಿದ್ದರು. ಇಂತಹ ಘಟನೆಗಳ ವೇಳೆ ಪೊಲೀಸರು ಪೂರಕವಾಗಿ ಕೆಲಸ ಮಾಡುತ್ತಾರೆ. ಆದರೆ, ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕರು ಸಮಾಜವನ್ನು ಒಡೆಯುವ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಹವಣಿಸುತ್ತಾರೆ.
ಇಲ್ಲೂ, ಅಲ್ಪಸಂಖ್ಯಾತರ ಮತ ಪಡೆಯುವ ಸಲುವಾಗಿ ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಮತ್ತೆ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಹೀಗಿರುವಾಗ ಈ ರೀತಿಯ ವೀಡಿಯೋ ರಿಲೀಸ್ ಮಾಡಿ ಆಕ್ರೋಶ ಹೆಚ್ಚಿಸೋ ಕೆಲಸವನ್ನು ಕುಮಾರಸ್ವಾಮಿಯವರು ಮಾಡಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.