ಉಡುಪಿ, ಜ 10 (DaijiworldNews/SM): ಜಿಲ್ಲೆಯಲ್ಲಿನ ಸಫಾಯಿ ಕರ್ಮಚಾರಿಗಳಿಗೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ, ಅವರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸುವಂತೆ ರಾಷ್ಟ್ರಿಯ ಸಫಾಯಿ ಕರ್ಮಚಾರಿಗಳ ಆಯೋಗ ಸದಸ್ಯ ಜಗದೀಶ್ ಹಿರೇಮಣೆ ಹೇಳಿದರು.
ಅವರು ಶುಕ್ರವಾರ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಫಾಯಿ ಕರ್ಮಚಾರಿಗಳ ಮತ್ತು ಅವರ ಅವಲಂಬಿತರ ವೈದ್ಯಕೀಯ ವೆಚ್ಚವನ್ನು ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಂದಲೇ ಭರಿಸುವಂತೆ ಸೂಚಿಸಿದ ಜಗದೀಶ್ ಹಿರೇಮಣಿ, ಕೆಲಸದ ಸಂದರ್ಭದಲ್ಲಿ ಸುರಕ್ಷತಾ ಸಾಧನಗಳನ್ನು ಬಳಸುವಂತೆ ಅವರಿಗೆ ಪ್ರೇರೇಪಿಸಬೇಕು, ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಫಾಯಿ ಕರ್ಮಚಾರಿಗಳು ವಿವಿಧ ಸೌಲಭ್ಯ ಪಡೆಯಲು ಪ್ರಮಾಣಪತ್ರದ ಅಗತ್ಯವಿರುವುದನ್ನು ಮನಗಂಡ ಜಗದೀಶ ಹಿರೇಮಣಿ, ಎಲ್ಲಾ ಸ್ಥಳಿಯ ಸಂಸ್ಥೆಗಳು ತಮ್ಮಲ್ಲಿ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳಿಗೆ, ಅವರ ಕುಟುಂಬ ಸದಸ್ಯರ ಹೆಸರನ್ನು ಸೇರಿಸಿ ಪ್ರಮಾಣಪತ್ರ ವಿತರಿಸುವಂತೆ ಮತ್ತು ಜಿಲ್ಲೆಯಲ್ಲಿ ಖಾಲಿ ಇರುವ ಪೌರ ಕಾರ್ಮಿಕ ಹುದ್ದೆಗಳನ್ನು ಜಿಲ್ಲಾ ಹಂತದಲ್ಲೇ ನೇಮಕಾತಿ ಮಾಡುವಂತೆ ಸೂಚಿಸಿದರು.
ಸಫಾಯಿ ಕರ್ಮಚಾರಿಗಳಿಗೆ ವಸತಿ ವ್ಯವಸ್ಥೆ ಒದಗಿಸುವಂತೆ ಸೂಚಿಸಿದ ಅವರು, ಉಡುಪಿಯ ಪೌರಕಾರ್ಮಿಕರ ವಸತಿಗೃಹದಲ್ಲಿ ವಾಸವಿರುವವರಿಗೆ, ಸದ್ರಿ ವಸತಿ ಗೃಹಗಳನ್ನು ಅವರ ಹೆಸರಿಗೆ ನೊಂದಣಿ ಮಾಡಿಕೊಡುವಂತೆ ಹಾಗೂ ಪಂಚಾಯತ್ಗಳಲ್ಲಿ ಕಾರ್ಯ ನಿರ್ವಹಿಸುವ ಸಫಾಯಿ ಕರ್ಮಚಾರಿಗಳಿಗೂ ಸಹ ನಿಯಮಾನುಸಾರ ಕನಿಷ್ಠ ವೇತನ ನೀಡುವ ಕುರಿತಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ತಿಳಿಸಿದರು.