ಮಂಗಳೂರು, ಜ.10 (Daijiworld News/PY) : ''ಮಂಗಳೂರಿನಲ್ಲಿ ಡಿ.19 ರಂದು ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧದ ಪ್ರತಿಭಟನೆಯ ನಿಜವಾದ ವೀಡಿಯೋಗಳನ್ನು ಬಿಡುಗಡೆ ಮಾಡಿರುವುದು ಸಂತಸ ತಂದಿದೆ ಇದಕ್ಕಾಗಿ ನಾನು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ'' ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.
ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಮಂಗಳೂರಿನ ಗಲಭೆಯ ನಿಜವಾದ ವೀಡಿಯೋಗಳನ್ನು ಬಿಡುಗಡೆ ಮಾಡಿ ಸತ್ಯವನ್ನು ಹೊರಹಾಕಿದ ವಿಚಾರ ಸಂತಸವನ್ನು ತಂದಿದೆ. ಸತ್ಯಕ್ಕೆ ಸಾವಿಲ್ಲ. ಸತ್ಯ ಇಂದಲ್ಲ ನಾಳೆ ಹೊರ ಜಗತ್ತಿಗೆ ಗೊತ್ತಾಗುತ್ತದೆ. ಸರ್ಕಾರ ತನ್ನ ಆಡಳಿತ ಸೋಲನ್ನು ಮುಚ್ಚಿ ಹಾಕಲು ಪ್ರಯತ್ನ ಪಟ್ಟಿತ್ತು. ಆದರೆ ಅದು ಸಾಧ್ಯವಾಗಿಲ್ಲ" ಎಂದು ತಿಳಿಸಿದರು.
"ಸರ್ಕಾರ ನನ್ನ ಮೇಲೆ ಕೇಸ್ ಹಾಕಿ ಬೇರೆ ರೀತಿ ಬಿಂಬಿಸಲು ಮುಂದಾಗಿತ್ತು, ಆದರೆ ಈ ವೀಡಿಯೋ ಅಂದಿನ ಘಟನೆ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗೊತ್ತಾಗಿದೆ. ನಾನು ಅವತ್ತೇ ಹೇಳಿದ್ದೆ, ಎಲ್ಲಾ ವಿಡಿಯೋ ಬಿಡುಗಡೆ ಮಾಡಿಲ್ಲ ಎಂದು. ಇವತ್ತು ಎಲ್ಲಾ ವಿಡಿಯೋವನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಜನರಿಗೆ ಸತ್ಯ ಏನೆಂದು ತಿಳಿದಿದೆ. ಆದ್ದರಿಂದ ನಾನು ಕುಮಾರಸ್ವಾಮಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ" ಎಂದು ತಿಳಿಸಿದರು.
"ನಾವು ತಪ್ಪಿತಸ್ಥರನ್ನು ತನಿಖೆಯಿಂದ ಕೈಬಿಡಿ ಎಂದು ಎಲ್ಲಿಯೂ ಹೇಳುತ್ತಿಲ್ಲ. ಆದರೆ ಅಮಾಯಕರನ್ನು ಪ್ರಕರಣದಿಂದ ಕೈಬಿಡಬೇಕು. ಇದೆಲ್ಲಾ ಸರಿಯಾಗಿ ನಡೆಯಬೇಕಾದರೆ ನ್ಯಾಯಾಂಗ ತನಿಖೆಗೆ ಆದರೆ ಮಾತ್ರ ಸಾಧ್ಯ. ಆದ್ದರಿಂದ ನಾವು ನ್ಯಾಯಾಂಗ ತನಿಖೆಯನ್ನು ಮಾಡಲು ಒತ್ತಾಯಿಸುತ್ತಿದ್ದೇವೆ. ಈ ವೀಡಿಯೋವನ್ನು ನಾವು ಬಿಡುಗಡೆ ಮಾಡಿದ್ದರೆ ಇದು ಸುಳ್ಳು ಎಂದು ಹೇಳಿ ಅದಕ್ಕೆ ಜಾತಿ ಧರ್ಮದ ಜಾತಿ ಧರ್ಮದ ವಿಚಾರವನ್ನು ಎಳೆಯುತ್ತಿತ್ತು ಎಂದು ಹೇಳಿದ್ದಾರೆ.