ಕುಂದಾಪುರ, ಜ 10 (Daijiworld News/MSP): ಯಕ್ಷಗುರು, ಯಕ್ಷ ಸಾಹಿತಿ, ನಿರ್ದೇಶಕ, ಭಾಗವತ, ಸಮರ್ಥ ಮುಮ್ಮೇಳ ಕಲಾವಿದ ಪ್ರಸ್ತುತ ಬಡಗುತಿಟ್ಟಿನ ಬಹುಬೇಡಿಕೆಯ ಭಾಗವತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವತರಿಗೆ ಕಾಳಿಂಗ ನಾವಡ ಪ್ರಶಸ್ತಿ ಲಭಿಸಿದೆ.
ಶೃಂಗೇರಿಯ ರಮೇಶ್ ಬೇಗಾರ್ ನೇತೃತ್ವದ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್ ಹಾಗೂ ಕಾಳಿಂಗ ಪ್ರತಿಷ್ಠಾನ ಪ್ರತೀ ವರ್ಷ ನಾವಡರ ಧರ್ಮ ಪತ್ನಿ ವಿಜಯಶ್ರೀ ನಾವಡ ಹಾಗೂ ಪುತ್ರ ಆಗ್ನೇಯ ನಾವಡರ ಮುತುವರ್ಜಿಯಲ್ಲಿ ಯಕ್ಷಗಾನದ ಯುವ ಸಾಧಕರಿಗೆ ನೀಡುತ್ತಾ ಬಂದ "ಕಾಳಿಂಗ ನಾವಡ ರಂಗ ಸಮ್ಮಾನ್" ಪ್ರಶಸ್ತಿ ಇದಾಗಿದೆ. ಈ ಹಿಂದೆ ಪಟ್ಲ, ರಾಘವೇಂದ್ರ ಮಯ್ಯ, ರಾಘವೇಂದ್ರ ಆಚಾರ್ಯ ಜನ್ಸಾಲೆ, ರವಿಚಂದ್ರ ಕನ್ನಡಿಕಟ್ಟೆ, ಸತ್ಯ ನಾರಾಯಣ ಪುಣಿಚಿತ್ತಾಯ ಮೊದಲಾದ ಯುವ ಭಾಗವತರಿಗೆ ಈ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 10ರಂದು ಶೃಂಗೇರಿ ಸಮೀಪದ ಮಕ್ಕಿಮನೆಯಲ್ಲಿ ನಡೆಯಲಿದೆ.
ಪ್ರಸಿದ್ಧ ಯಕ್ಷಗಾನ ಕಲಾವಿದ ಹೆರಿಯ ನಾಯ್ಕ ಮೊಗೆಬೆಟ್ಟು ಮತ್ತು ಗುಲಾಬಿ ಮೊಗೇರ್ತಿ ಅವರ ಏಕಮಾತ್ರ ಪುತ್ರರಾಗಿ ತಾ.20-06-1983ರಲ್ಲಿ ಜನಿಸಿದ ಇವರಿಗೆ ಕಲೆ ರಕ್ತಗತವಾಯಿತು. ಇವರ ತಂದೆಯಲ್ಲಿ ಆನೇಕರು ಯಕ್ಷಗಾನ ಅಭ್ಯಾಸಿಸಲು ಬರುತ್ತಿದ್ದರು. ಆ ಯಕ್ಷಗಾನೀಯ ವಾತಾವರಣದಲ್ಲಿದ್ದ ಪ್ರಸಾದರಿಗೆ ನಾವಡರ ಧ್ವನಿಸುರುಳಿ ಇನ್ನಷ್ಟು ಸೆಳೆತ ನೀಡಿತು. ತಂದೆಯಿಂದ ರಂಗಕ್ರಮ, ಪ್ರಸಂಗನಡೆ ಕೇಳುತ್ತಾ ಸಾಂಪ್ರದಾಯಿಕತೆ ಬಗ್ಗೆ ವಿಶೇಷ ಗೌರವ ಹೊಂದಿದ ಇವರಿಗೆ ತಂದೆಯೇ ಮೊದಲ ಗುರುವಾದರು. ಹಳ್ಳಾಡಿ ಸುಬ್ರಾಯ ಮಲ್ಯರ ನಿರ್ದೇಶನದಲ್ಲಿ ಮೊಗೆಬೆಟ್ಟು ಚಿಕ್ಕಮ್ಮ ಹಾಗುಳಿ ಯಕ್ಷಗಾನ ಕಲಾ ಸಂಘದಲ್ಲಿ ಬಾಲಕಲಾವಿದನಾಗಿ 10ನೇ ವಯಸ್ಸಿನಲ್ಲಿಯೇ ಬಬ್ರುವಾಹನನಾಗಿ ರಂಗ ಪ್ರವೇಶಮಾಡಿದರು. 1998ರಲ್ಲಿ ಉಡುಪಿ ಯಕ್ಷಗಾನ ಕೇಂದ್ರ ಸೇರ್ಪಡೆ, ನೀಲಾವರ ಲಕ್ಷ್ಮೀನಾರಾಯಣಯ್ಯ, ಬನ್ನಂಜೆ ಸಂಜೀವ ಸುವರ್ಣರಿಂದ ನೃತ್ಯ ಕಲಿಕೆ, ಗೋರ್ಪಾಡಿ ವಿಠಲ ಪಾಟೀಲರ ಶಿಷ್ಯರಾಗಿ ೭ ವರ್ಷ ಭಾಗವತಿಕೆ ಅಭ್ಯಾಸ, ಯಕ್ಷಗಾನ ಪುರಾಣದ ಮಾಹಿತಿ ಸಂಗ್ರಹ, ಛಂದೋ ವಿದ್ವಾಂಸ ಗಣೇಶ ಕೊಲೆಕಾಡಿಯವರಲ್ಲಿ ಯಕ್ಷಗಾನ ಛಂದಸ್ಸು ಶಿಕ್ಷಣ, ಗಮಕ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ, ಕಲಿತ ಕೇಂದ್ರದಲ್ಲಿಯೇ ಗುರುವಾಗಿ ಯಕ್ಷಸೇವೆ ಸಲ್ಲಿಸಿದರು.
ಇವರ ಬಹುಮುಖ ಸಾಧನೆಗೆ ರಾಜ್ಯಮಟ್ಟದಿಂದ ೧೫೦ಕ್ಕೂ ಮಿಕ್ಕಿನ ಸನ್ಮಾನ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೂಡದಲ್ಲಿ ಜರಗಿದ ಯಕ್ಷಕವಿ ಸಮ್ಮೇಳನದಲ್ಲಿ ಸ್ಕಂದ ಪ್ರಶಸ್ತಿ, ಕಿಚ್ಚ ಸುದೀಪ್ ಅವರಿಂದ ಬೆಂಗಳೂರಲ್ಲಿ ಮಣೂರು ಮಯ್ಯ ಪ್ರತಿಷ್ಠಾನದ ವತಿಯಿಂದ ಪುರಸ್ಕಾರ, ’ದಶಾವತಾರಿ’, ಸವ್ಯಸಾಚಿ, ಯಕ್ಷಸಾಹಿತ್ಯರತ್ನ, ಯಕ್ಷಾಂಬರ ಮಾರ್ತಾಂಡ, ಕವಿ ಕೋಗಿಲೆ ಬಿರುದು ಸನ್ಮಾನಗಳು, ಮಾಬುಕಳದಲ್ಲಿ ಋಷಿಕೇಶ ಮಯ್ಯರ ಯಕ್ಷಬಳಗದಿಂದ ’ಯಕ್ಷ ಅಕ್ಷರ ಸರಸ್ವತಿ’ ಬಿರುದು ಸನ್ಮಾನ ಲಭಿಸಿದೆ.
ಇವರು ಅಮರಾಮೃತ, ಅಮೃತ ಘಳಿಗೆ, ದುರ್ಗಾಷ್ಟಮಿ ಶತದಿನೋತ್ಸವ ಆಚರಿಸಿಕೊಂಡರೆ ಸಿಂಗಾರ ಪುಷ್ಪಾ, ಶೃಂಗಾರ ಕಾವ್ಯ, ಸ್ವಪ್ನ ಮಂಟಪ, ಕೋಳಿಪಡೆ ರಂಗ(ಆಡಿಯೋ), ಬ್ರಹ್ಮಾಕ್ಷರ(ಮಕ್ಕಳ ಪಂಚತಂತ್ರ ಯಕ್ಷಗಾನ) ಮಹಾಶಕ್ತಿ ಗದ್ದುಗೆ ಅಮ್ಮ, ಕಾಮನಬಿಲ್ಲು, ನಕ್ಷತ್ರನಾಗಿಣಿ, ನಾಟ್ಯವಲ್ಲಿ (ವಿಸಿಡಿ), ವಡ್ಡರ್ಸೆ ವಸುಂಧರೆ, ಪ್ರಚಂಡ ಪಂಜುರ್ಲಿ, ಪಂಚದೈವಪ್ರತಾಪ, ಹೀರೆಮಹಾಲಿಂಗೇಶ್ವರ ಮಹಾತ್ಮೆ, ಪಾವನ ಪಕ್ಷಿ, ಸರ್ಪ ಸುಪರ್ಣಾ, ವಿಕ್ರಮಶಿಲ್ಪಿ ವೀರ ಕಲ್ಕುಡ, ಗುರು ಶಿಷ್ಯರು, ಭಾಗ್ಯದ ಬಬ್ಬು ಸ್ವಾಮಿ, ಅಗ್ನಿ ವರ್ಷ, ಅಪೂರ್ವ ಅರ್ಧಾಂಗಿ, ರಮೇಶ ಬೇಗಾರ್ ಕಥೆ ರಚನೆಯ ಚಿತ್ರಲೇಖಾ, ಸರ್ಪಸಂಸ್ಕಾರ, ಮೇಘಧಾರಿಣಿ, ಶಿವ ಶಾಂಭವಿ, ಗಂಧ ಚಂದನ, ಅರ್ಪಿತಾ ಹೆಗಡೆ ಕಥೆ ರಚನೆಯ ನಾಗರ ಪಂಚಮಿ, ಪ್ರೇಮ ಸಾರಂಗ, ಗಂಡುಗಲಿ ದೇವರಾಯ, ವಾಸುದೇವ ಮಯ್ಯ ಕಥೆ ರಚನೆಯ ಇಂದ್ರನಾಗ, ಪುಷ್ಪಸಿಂಧೂರಿ, ದೇವಗಂಗೆ, ಸೂರ್ಯ ಸಂಕ್ರಾಂತಿ ಪ್ರಸಂಗಗಳಿಗೆ ಪದ್ಯ ರಚನೆ ಮಾಡಿದ್ದಾರೆ. ಯೋಧ ಧರ್ಮೋವರಂ ಕರ್ಮ, ರಂಗ ಸಖಿ ಯಕ್ಷಗಾನ ರೂಪಕಗಳಾಗಿವೆ. ಪತ್ನಿ ಶರಾವತಿ, ಪುತ್ರ ಅಮೋಘ, ಪುತ್ರಿ ಆರಾಧ್ಯ. ಅವರೊಂದಿಗಿನ ಸಂತೃಪ್ತ ಕುಟುಂಬ ಇವರದ್ದು. ಇವರ ಬಹುಮುಖ ಪ್ರತಿಭೆಗೆ ಯೋಗ್ಯವಾಗಿಯೇ ಪ್ರಶಸ್ತಿ ಸಂದಿದೆ.