ಮಂಗಳೂರು, ಜ 10, (Daijiworld News/MSP): ಆಂಧ್ರಪ್ರದೇಶದಿಂದ ಥೈಲ್ಯಾಂಡ್ಗೆ ಅಕ್ರಮವಾಗಿ ರಕ್ತಚಂದನವನ್ನು ಸಾಗಾಟ ಮಾಡಲೆಂದು ಬೈಕಂಪಾಡಿಯ ಕೈಗಾರಿಕಾ ಪ್ರದೇಶದ ಗೋಡೌನ್ ಒಂದರಲ್ಲಿ ವಿದೇಶಕ್ಕೆ ಸಾಗಿಸಲು ಸಂಗ್ರಹಿಟ್ಟಿದ್ದ ರಕ್ತಚಂದನವನ್ನು ಪಣಂಬೂರು ಪೊಲೀಸರು ಹಾಗೂ ಪಣಂಬೂರು ಉಪವಿಭಾಗದ ನಿಗ್ರಹದಳ ವಶಕ್ಕೆ ಪಡೆದು ಐವರನ್ನು ತಂಡ ಬಂಧಿಸಿದೆ.
ಬಂಧಿತರನ್ನು ಕಲ್ಲಾಪು ಪೆರ್ಮನ್ನೂರು ನಿವಾಸಿ ತಬ್ರೇಜ್ (36), ಫಾರೂಕ್ (45) ಹುಸೈನ್ ಕುಂಜಿ (45) ಕಾವೂರಿನ ರಾಕೇಶ್ ಶೆಟ್ಟಿ (44) ಉಳ್ಳಾಲ ತೊಕ್ಕೊಟ್ಟು ನಿವಾಸಿ ಲೋಹಿತ್, ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ, ಬೆಂಗಳೂರು ನಿವಾಸಿ ಪ್ರದೀಪ್ ಎಂಬಾತ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ ಎರಡು ಕೋಟಿ ರೂ. ಮೌಲ್ಯದ ನಾಲ್ಕು ಟನ್ ರಕ್ತ ಚಂದನ, ಎರಡು ಕಾರು ಒಂದು ಟೆಂಪೋ ಹಾಗೂ 7 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎನ್ಎಂಪಿಟಿ ಮೂಲಕ ಹಡಗಿನಲ್ಲಿ ಥೈಲ್ಯಾಂಡ್ ಗೆ ಅಕ್ರಮವಾಗಿ ರಕ್ತಚಂದನವನ್ನು ಸಾಗಿಸಲು ಸಂಚು ರೂಪಿಸಿದ್ದರು. ಆಂಧ್ರಪ್ರದೇಶದಿಂದ ರಕ್ತಚಂದನವನ್ನು ಕಂಟೈನರ್ನಲ್ಲಿ ತಂದು ಬೈಕಂಪಾಡಿಯ ಗೋಡೌನ್ವೊಂದರಲ್ಲಿ ಸಂಗ್ರಹಿಸಿಡಲಾಗಿತ್ತು. ಈ ರಕ್ತಚಂದನವು ಬೆಂಗಳೂರಿನ ಪ್ರದೀಪ್ ಎಂಬಾತನಿಗೆ ಸೇರಿದ್ದಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ನಿರ್ದೇಶನದಂತೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶುಗಿರಿ, ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಲಕ್ಷ್ಮೀಗಣೇಶ್ ಮಾರ್ಗದರ್ಶನದಲ್ಲಿ ಎಸಿಪಿ ಬೆಳ್ಳಿಯಪ್ಪ ನೇತೃತ್ವ ದಲ್ಲಿ ಪಣಂಬೂರು ಪೊಲೀಸ್ ಇನ್ಸ್ಪೆಕ್ಟರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.