ಉಡುಪಿ, ಜ 09 (DaijiworldNews/SM): ಖಾಸಗಿ ಬಸ್ಸಿನಲ್ಲಿ ವಿಷ ಕುಡಿದ ದಂಪತಿ ಗಂಭೀರವಾದ ಘಟನೆ ಕೊಲ್ಲೂರಿನಿಂದ ಉಡುಪಿಗೆ ಪ್ರಯಾಣಿಸುವ ಬಸ್ಸಿನಲ್ಲಿ ನಡೆದಿದೆ. ತಮಿಳುನಾಡು ಮೂಲದ ರಾಜ್ ಕುಮಾರ್ ಹಾಗೂ ಪತ್ನಿ ಸಂಗೀತಾ ಗಂಭೀರವಾದವರು. ವಿಷಪ್ರಾಶನದಿಂದ ಗಂಭೀರ ಸ್ಥಿತಿಯಲ್ಲಿದ್ದ ದಂಪತಿಗಳನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತ: ತಮಿಳುನಾಡಿನವರಾದ ದಂಪತಿ ಸದ್ಯ, ಉಡುಪಿಯ ಟೆಂಟ್ ನಲ್ಲಿ ವಾಸವಾಗಿದ್ದರು. ಇಂದು ಕೊಲ್ಲೂರು ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿ ಬರುವಾಗ ಪ್ರಯಾಣಿಸುತ್ತಿದ್ದ ಬಸ್ಸಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನು, ಅವರ ಜೊತೆಗೆ ಓರ್ವ ಬಾಲಕನೂ ಇದ್ದ ಎಂದು ತಿಳಿದು ಬಂದಿದೆ. ವಿಷ ಸೇವನೆಯಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ದಂಪತಿಗಳ ರಕ್ಷಣೆಗೆ ಬಸ್ಸಿನ ಚಾಲಕ ಹಾಗೂ ಸಹ ಪ್ರಯಾಣಿಕರು ಧಾವಿಸಿ ಆಸ್ಪತೆಗೆ ದಾಖಲು ಮಾಡಿದ್ದಾರೆ.