ಕಾರ್ಕಳ, ಜ 09(Daijiworld News/MSP): ಯುವಜನತೆ ಸ್ಪಷ್ಟ ಗುರಿಯೊಂದಿಗೆ ರಾಷ್ಟ್ರಕ್ಕೆ ಶ್ರೇಷ್ಠ ಬದಲಾವಣೆ ಕೊಡಬೇಕೆನ್ನುವ ದೃಷ್ಟಿಕೋನದಲ್ಲಿ ಹೆಜ್ಜೆ ಹಾಕಿದರೆ ಹೊಸ ಭಾರತ ನಿರ್ಮಾಣ ಸಾಧ್ಯ ಎಂದು ಯುವ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜು ಆವರಣದಲ್ಲಿ ಎಲ್ಕೆಜಿ, ಯುಕೆಜಿ ಮಕ್ಕಳಿಗಾಗಿ ನೂತನವಾಗಿ ನಿರ್ಮಾಣವಾಗಿರುವ 1.5 ಕೋಟಿ ರೂ. ವೆಚ್ಚದ ’ಕಿಶೋರ ಪ್ರಿಯ’ ಕಟ್ಟಡ ಲೋಕಾರ್ಪಣೆ ಸಮಾರಂಭದಲ್ಲಿ ಗುರುವಾರ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಜೀವನದ ಗುರಿ ಬೇರೆಯೇ ಇದೆ. ಇದು ಯುಗ, ಯುಗಾಂತರಗಳಲ್ಲಿ ಛಾಪನ್ನು ಮೂಡಿಸುವಂತಹಾ ವ್ಯಕ್ತಿತ್ವದ ಹೆಗ್ಗುರುತು ಆಗಿರುತ್ತದೆ. ಭಾರತವು ಆಸಾಧಾರಣ ಪರಿವರ್ತನೆಯ ಹಾದಿಯಲ್ಲಿದ್ದು, ಇಂದು ಪರಿಪೂರ್ಣತೆಯ ವ್ಯಕ್ತಿ ನರೇಂದ್ರ ಮೋದಿ ನಮ್ಮ ಪ್ರಧಾನಿಯಾಗುವುದರ ಮೂಲಕವಾಗಿ ಪರಿವರ್ತನೆಗಳು ಸಾಕಾರವಾಗುತ್ತಿದೆ. ಇಂದು ಶಿಕ್ಷಣವು ವಿದ್ಯಾರ್ಥಿಗಳನ್ನು ಡಾಕ್ಟರ್, ಇಂಜೀನಿಯರ್ಗಳಾಗುವತ್ತ ಪ್ರೇರಕವಾಗಿ ಪಾಶ್ಚಾತ್ಯ ಚಿಂತನೆಯತ್ತ ಒಯ್ಯುತ್ತವೆ ಎಂದರು.
ಅಮೇರಿಕಾ, ಇರಾನ್ ನಡುವಣ ಕದನ ಕಾರ್ಮೋಡವನ್ನು ತಣಿಸಲು ಇರಾನ್ ದೇಶ ಭಾರತದ ಮಧ್ಯಸ್ಥಿಕೆಯನ್ನು ಬಯಸಿರುವುದು, ಬಲೂಚಿಸ್ತಾನ, ಸಿಂಧ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಮಂದಿ ಇಂಗ್ಲೇಂಡ್ನಲ್ಲಿ ಪ್ರತಿಭಟನೆಯನ್ನು ನಡೆಸಿ ತಮ್ಮನ್ನೂ ಭಾರತ ದೇಶದೊಂದಿಗೆ ಸೇರಿಸಲು ಬೇಡಿಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂದಿರಿಸಿರುವುದು, ಕಾಶ್ಮೀರದ ೩೭೦ನೇ ವಿಧಿ ರದ್ದುಗೊಳಿಸಿದ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ರಾಷ್ಟ್ರಗಳು ಭಾರತದ ಪರ ನಿಂತಿರುವುದು ಭಾರತವು ಪರಿವರ್ತನೆಯ ಹಾದಿಯಲ್ಲಿರುವುದನ್ನು ಸೂಚಿಸುತ್ತವೆ ಎಂದು ಸೂಲಿಬೆಲೆ ಹೇಳಿದರು.
ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಲಕ್ಷ್ಮೀ ನಾರಾಯಣ, ರಾಘವೇಂದ್ರ, ವಿದ್ಯುತ್ ಗುತ್ತಿಗೆದಾರ ಶ್ರೀಪತಿ ಭಟ್, ಮಹಾಂತೇಶ್ ಮುಂತಾದವರನ್ನು ಗೌರವಿಸಲಾಯಿತು.ಈ ಸಂದರ್ಭ ಕಟ್ಟಡ ಲೋಕಾರ್ಪಣೆ ಮಾಡಿದ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪ್ರಾಂಶುಪಾಲ ರಾಮಕೃಷ್ಣ ಪೈ ರಚಿಸಿದ ಅರ್ಥಶಾಸ್ತ್ರ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಮಂಗಳೂರು ವಿವಿಯಲ್ಲಿ ಇಂಗ್ಲೀಷ್ ಎಂಎಯಲ್ಲಿ ಪ್ರಥಮ ರ್ಯಾಂಕ್ ವಿಜೇತೆ ಆಂಗ್ಲ ಉಪನ್ಯಾಸಕಿ ಅಂಕಿತಾ ಅವರನ್ನು ಸಮ್ಮಾನಿಸಲಾಯಿತು. ಸಂಸ್ಥೆಗೆ ಟೆಲಿಸ್ಕೋಪ್ ದಾನವಾಗಿ ನೀಡಿದ ಆದರ್ಶ ಅನಂತ ಆಚಾರ್ ಹಾಗೂ ಗಾಯತ್ರಿ ಅನಂತ ಆಚಾರ್ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅದಮಾರು ಮಠ ಶಿಕ್ಷಣ ಮಂಡಳಿಯ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್, ಪ್ರಾಂಶುಪಾಲ ರಾಮಕೃಷ್ಣ ಪೈ, ಉಪ ಪ್ರಾಂಶುಪಾಲೆ ಡಾ. ಒಲಿವಿಟಾ ಡಿಸೋಜ, ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀಕಾಂತ ರಾವ್, ದೇವಿಪ್ರಸಾದ್ ಬೆಳ್ಳಿಬೆಟ್ಟು ಉಪಸ್ಥಿತರಿದ್ದರು.