ಕುಂದಾಪುರ, ಜ 9 (Daijiworld News/MB):"ಸಾಮಾಜಿಕವಾಗಿ ತುಳಿತಕ್ಕೊಳಗಾಗಿದ್ದ ಬಿಲ್ಲವ ಸಮಾಜ ರಾಷ್ಟ್ರೀಯತೆಯ ವಿಚಾರ ಬಂದಾಗ ಎಲ್ಲವನ್ನೂ ಮೆಟ್ಟಿ ನಿಂತು ರಾಷ್ಟ್ರಪ್ರೇಮೆ ಮೆರೆದಿರುವುದು ನಮ್ಮ ಸಮಾಜದ ಹೆಮ್ಮೆ. ಒಂದೇ ಜಾತಿ, ಒಂದೇ ಮತ ಎನ್ನುವ ಧ್ಯೇಯ ವಾಕ್ಯದೊಂದಿಗೆ ನಮ್ಮ ಗುರುಗಳಾದ ನಾರಾಯಣಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗಿ ಬಂದಿದ್ದೇವೆ. ಸಮಾನತೆ, ಜಾತೀಯತೆ, ರಾಷ್ಟ್ರೀಯತೆಗೆ ಭಂಗವಾದಾಗ ಜೈಲಿಗೆ ಹೋಗಿ ಕೊಳೆಯುತ್ತಾ ಇರುವವರು ಬಿಲ್ಲವರು. ಆದರೆ ಇದೇ ತತ್ವವನ್ನು ದುರುಪಯೋಗ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದ್ದು, ಹಿಂದೂ ಧರ್ಮವನ್ನು ಒಡೆದು ಆಳುವ ತಂತ್ರಕ್ಕೆ ಬಿಲ್ಲವ ಸಮಾಜದ ವಿರೋಧವಿದೆ" ಎಂದು ಅಚ್ಯುತ್ ಅಮೀನ್ ಕಲ್ಮಾಡಿ ಹೇಳಿದರು.
ಅವರು ಕುಂದಾಪುರದ ಪಾರಿಜಾತ ಹೊಟೇಲ್ ಸಭಾಂಗಣದಲ್ಲಿ ಜನವರಿ 9ರಂದು ಹಮ್ಮಿಕೊಳ್ಳಲಾದ ಬಿಲ್ಲವ ಮುಸ್ಲಿಂ ಸ್ನೇಹ ಸಮಾವೇಶವನ್ನು ವಿರೋಧಿಸಿ ನಡೆಸಲಾದ ಸಮಾಲೋಚನಾ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
"ದೇಶದಲ್ಲಿ ಇರುವ ವಿಭಿನ್ನ ಸಂಸ್ಕೃತಿಯೊಂದಿಗೆ ಬಿಲ್ಲವ ಸಮಾಜಕ್ಕೆ ಪ್ರತ್ಯೇಕವಾಗಿ ಸ್ನೇಹ ಸಮ್ಮಿಲನ ನಡೆಸುವ ಅಗತ್ಯ ಇನ್ನೂ ಬಂದಿಲ್ಲ. ಅದು ಬರುವುದಕ್ಕೂ ಬಿಡುವುದಿಲ್ಲ. ಗೋವಿನ ಆರಾಧಕಾರಾದ ನಮಗೆ ದನದ ಮಾಂಸಾಹಾರಿಗಳ ಜೊತೆಗೆ ಸ್ನೇಹ ಸಮ್ಮಿಲನದ ಅಗತ್ಯವೂ ಇಲ್ಲ. ನಾವು ಅನಾದಿ ಕಾಲದಿಂದಲೂ ನಮ್ಮ ಸುತ್ತ ಮುತ್ತಲಿನ ಮುಸ್ಲಿಮರ ಜೊತೆಗೆ ಸೌಹಾರ್ದಯುತವಾಗಿಯೇ ವಾಸಿಸುತ್ತಿದ್ದೇವೆ. ಸೌಹಾರ್ದತೆಗೆ ಹೊಸ ಅರ್ಥ ಕಲ್ಪಿಸಿ ಅದನ್ನು ರಾಜಕೀಯವಾಗಿ ಬಳಸಿಕೊಂಡು ಆಚರಿಸುವ ಪರಿಸ್ಥಿತಿ ಇನ್ನೂ ಬಂದಿಲ್ಲ. ಯಾರಾದರೂ ಬಿಲ್ಲವ ಸಮಾಜವನ್ನು ರಾಜಕೀಯ ದುರುಪಯೋಗಕ್ಕೆ ಬಳಸಿಕೊಂಡಿದ್ದೇ ಆದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವ ಸಮಾಜ ಎದ್ದು ನಿಲ್ಲುತ್ತದೆ" ಎಂದು ಅಚ್ಚರಿಸಿದರು.
ಕಾಳಾವರ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಪೂಜಾರಿ ಮಾತನಾಡಿ, "ರಾಷ್ಟ್ರೀಯತೆಯ ವಿಚಾರ ಬಂದಾಗ, ಏಕತೆಯ ವಿಚಾರ ಬಂದಾಗ, ಹಿಂದೂಗಳ ವಿಚಾರ ಬಂದಾಗ, ಸಮರ್ಪಣೆಯ ವಿಚಾರ ಬಂದಾಗ ಮುಂಚೂಣಿಯಲ್ಲಿ ಬಿಲ್ಲವ ಸಮಾಜದ ಯುವಕರು ಎದ್ದು ನಿಲ್ಲುತ್ತಾರೆ. ಅಂತಹಾ ಬಿಲ್ಲವ ಸಮಾಜವನ್ನು ಒಡೆಯುವ, ಹಿಂದೂಗಳ ನಡುವೆ ಭಿನ್ನಾಭಿಪ್ರಾಯ ತಂದೊಡ್ಡುವ ಹುನ್ನಾರ ನಡೆಯುತ್ತಿರುವ ಪರಿಣಾಮವೇ ಈ ಸ್ನೇಹ ಸಮ್ಮಿಲನ. ಬಿಲ್ಲವರ ಹೋರಾಟದ ಫಲವಾಗಿ ಅನೈತಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮುಂದೂಡಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಅದು ನಡೆಯಲು ಎಂದಿಗೂ ಬಿಡುವುದಿಲ್ಲ" ಎಂದು ಹೇಳಿದರು.
ಕುಂದಾಪುರ ತಾಲೂಕು ಪಂಚಾಯಿತಿ ಮಾಜೀ ಅಧ್ಯಕ್ಷ ಭಾಸ್ಕರ ಬಿಲ್ಲವ ಮಾತನಾಡಿ, "ಮುಸ್ಲಿಮರ ಜೊತೆಗೆ ಸ್ನೇಹ ಸಮ್ಮಿಲನ ನಡೆಸಲು ಬಿಲ್ಲವರು ಮಾತ್ರ ಯಾಕೆ. ಮಾಡುವುದಿದ್ದರೆ ಎಲ್ಲಾ ಜಾತಿಗಳನ್ನೂ ಒಗ್ಗೂಡಿಸಿ ಸಮ್ಮಿಲನ ಮಾಡಿ. ಹಿಂದಿನಿಂದಲೂ ದೌರ್ಜನ್ಯಕ್ಕೊಳಗಾಗಿರುವ ಬಿಲ್ಲವ ಸಮಾಜವನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ಹುನ್ನಾರ ನಡೆಯುತ್ತಿದೆಯೇ" ಎಂದು ಪ್ರಶ್ನಿಸಿದರು.
ಅವಿನಾಶ್ ಉಲ್ತೂರು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಬಿಲ್ಲವ ಸಮಾಜದ ಮುಖಂಡರಾದ ಗಿರೀಶ್ ಪೂಜಾರಿ, ಗ್ರಾ.ಪಂ ಸದಸ್ಯ ಪ್ರಕಾಶ್ ಪೂಜಾರಿ ಬೀಜಾಡಿ, ಪುರಸಭಾ ಸದಸ್ಯೆಯರಾದ ವನಿತಾ ಬಿಲ್ಲವ ಹಾಗೂ ಪ್ರೇಮಲತಾ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.