ಉಪ್ಪಿನಂಗಡಿ, ಜ 9 (Daijiworld News/MB) : ರೆಸಾರ್ಟ್ ಒಂದರಲ್ಲಿ ಹನಿಟ್ಯ್ರಾಪ್ ದಂಧೆ ಮಾಡುತ್ತಿದ ಆರೋಪದ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ವೇಳೆ ಮೂವರು ಪರಾರಿಯಾಗಿದ್ದಾರೆ.
ಬಂಧಿತರನ್ನು ಕುಶಾಲನಗರ ನಿವಾಸಿ ಲೋಹಿತ್ ಹಾಗೂ ವಿಟ್ಲ ನಿವಾಸಿ ಶರೀಫ್ ಎಂದು ಗುರುತಿಸಲಾಗಿದ್ದು ಪ್ರಕರಣದ ಪ್ರಮುಖ ಆರೋಪಿಗಳಾದ ವಿಟ್ಲದ ಜಮಾಲು, ನೌಶಾದ್ ಹಾಗೂ ಜೀವನ್ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಪೊಲೀಸರು, ಉಪ್ಪಿನಂಗಡಿಯ ರೆಸಾರ್ಟ್ನಲ್ಲಿ ಎರಡು ಜೋಡಿಗಳು ಇದ್ದ ವೇಳೆ ಐವರ ತಂಡ ದಾಳಿ ನಡೆಸಿದ್ದು ತಾವು ಕೇರಳದ ಪೊಲೀಸರು ಎಂದು ಹೇಳಿ ಅವರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಲು ಯತ್ನ ಮಾಡುತ್ತಿದ್ದ ಕುರಿತು ಖಚಿತ ಮಾಹಿತಿಯನ್ನು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ್ದು ಈ ಹಿನ್ನಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧನ ಮಾಡಿದ್ದು ಆರೋಪಿಗಳು ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಮಂಗಳೂರು ಮೂಲದ ಇಬ್ಬರು ಯುವತಿಯರನ್ನು ಬಳಸಿಕೊಂಡು ಯುವಕರನ್ನು ಬಲೆಗೆ ಬೀಳಿಸಿ ಪುತ್ತೂರು ಸಾಲ್ಮರ ಎಂಬಲ್ಲಿ ಆರೋಪಿಗಳ ಮನೆಗೆ ಬರಲು ಹೇಳಿ ಅಲ್ಲಿ ಅವರನ್ನು ಜೋಡಿಗಳನ್ನಾಗಿ ಮಾಡಿ ಉಪ್ಪಿನಂಗಡಿಯ ರೆಸಾರ್ಟ್ ಒಂದಕ್ಕೆ ಕಳುಹಿಸುತ್ತಿದ್ದರು. ಬಳಿಕ ಜೋಡಿಗಳು ಇರುವ ಕೋಣೆಗೆ ತಾವು ಪೊಲೀಸರು ಎಂದು ಹೇಳಿ ದಾಳಿ ನಡೆಸುವ ಆರೋಪಿಗಳು ಸುಲಿಗೆ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ವಂಚನೆಗೆ ಒಳಗಾದ ಯುವಕನೋರ್ವ ಕೇರಳದಲ್ಲಿರುವ ತನ್ನ ಸಂಬಂಧಿಯಾದ ಪೊಲೀಸ್ ಅಧಿಕಾರಿಗೆ ಈ ಕುರಿತು ಮಾಹಿತಿ ನೀಡಿದ್ದು, ಅಧಿಕಾರಿಗಳು ಹೇಳಿದಂತೆ ಅವರಿಗೆ ಲೋಕೇಶನ್ ಬಗ್ಗೆ ಮಾಹಿತಿ ನೀಡಿದ್ದ. ಈ ಮಾಹಿತಿಯನ್ನು ಕೇರಳದ ಪೊಲೀಸ್ ಅಧಿಕಾರಿ ಉಪ್ಪಿನಂಗಡಿ ಪೊಲೀಸರಿಗೆ ತಿಳಿಸಿದ್ದು ಈ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಸಿಐ ನಾಗೇಶ್ ಕದ್ರಿ ನೇತೃತ್ವದ ಪೊಲೀಸ್ ತಂಡ ರೆಸಾರ್ಟ್ಗೆ ದಾಳಿ ನಡೆಸಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆ ಸಂತ್ರಸ್ಥರೆಂದು ಗುರುತಿಸಿಕೊಂಡಿರುವ ಕೇರಳದ ಕಣ್ಣೂರಿನ ಪೆರುಬುಲ್ಲಿ ಕೆರಿ ಕುಟ್ಯಾಟೂರ್ ತಳಿಪರಂಬ ನಿವಾಸಿ ದಿಲೀಪ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ವಂಚನೆ ಮಾಡಿ ದರೋಡೆ ನಡೆಸಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ ದಿಲೀಪ್ ಮೊಬೈಲ್ಗೆ ಹುಡುಗಿಯೊಬ್ಬರು ಕರೆ ಮಾಡಿ ಕಲ್ಲು ಕೋರೆಗೆ ಕೆಲಸಕ್ಕೆ ಜನ ಬೇಕಿದ್ದಾರೆ ಕಾಸರಗೋಡಿಗೆ ಬನ್ನಿ ಎಂದು ತಿಳಿಸಿದ್ದಾರೆ. ಸ್ನೇಹಿತರಾದ ಜನಾರ್ಧನನ್, ಪ್ರಶಾಂತ್, ಪ್ರವೀಣ್ ಎಂಬವರ ಜೊತೆ ದಿಲೀಪ್ ಅವರು ಇನ್ನೋವಾ ಕಾರಿನಲ್ಲಿ ತೆರಳಿದ್ದು ಕಣ್ಣೂರಿನಲ್ಲಿ ಆ ಹುಡುಗಿ ಕರೆ ಮಾಡಿ ದಾರಿ ಕೇಳಿ ಪುತ್ತೂರಿಗೆ ಬಂದಿದ್ದಾರೆ. ರಾತ್ರಿ ಸುಮಾರು 12:00 ಗಂಟೆಗೆ ಅಲ್ಲಿ ಆ ಹುಡುಗಿ ಭೇಟಿಯಾಗಿದ್ದು ಒಂದು ಮನೆಗೆ ತಲುಪಿದ್ದಾರೆ. ಆ ಮನೆಯಲ್ಲಿ ಇನ್ನೋರ್ವ ಹುಡುಗಿ ಇದ್ದಳು. ಆ ಸಂದರ್ಭದಲ್ಲಿ ಇಬ್ಬರು ಗಂಡಸರು ಮನೆಗೆ ನುಗ್ಗಿ ಹಲ್ಲೆ ಮಾಡಿ ಕೋಣೆಯೊಳಗೆ ಅಕ್ರಮವಾಗಿ ಬಂಧಿಸಿ ಫೋಟೋ ತೆಗೆದು ಇದನ್ನು ಪೊಲೀಸರಿಗೆ ಮಾಧ್ಯಮದವರಿಗೆ ನೀಡುವುದಾಗಿ ತಿಳಿಸಿದ್ದಾರೆ. ಆ ಬಳಿಕ ಪೊಲೀಸರು ಎಂದು ಹೇಳಿದ ಬಂದ 3 ಜನರು ಹಲ್ಲೆ ಮಾಡಿ 10 ಲಕ್ಷ ಕೊಡಬೇಕು ಇಲ್ಲವಾದರೆ ಮಾಧ್ಯಮಕ್ಕೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಆ ಸಂದರ್ಭದಲ್ಲಿ ದಿಲೀಪ್ ಹಾಗೂ ಅವರ ಗೆಳೆಯರು ಅಷ್ಟು ಹಣ ಇಲ್ಲ ಎಂದು ಹೇಳಿದ್ದು ಆರೋಪಿಗಳು ದಿಲೀಪ್ ಹಾಗೂ ಗೆಳೆಯರ ಮೊಬೈಲ್ಗಳು ಹಾಗೂ ಕಾರಿನ ಕೀ, ಕಾರಿನ ದಾಖಲಾತಿಗಳನ್ನು ಪಡೆದು, ಯಾವುದೋ ದಾಖಲಾತಿಗೆ ಸಹಿ ಹಾಗೂ ಬೆರಳಚ್ಚು ಹಾಕಿಸಿ ಮನೆಯಲ್ಲಿ ಕೂಡಿ ಹಾಕಿದ್ದಾರೆ. ಮರುದಿನ ಪೊಲೀಸರು ಎಂದು ಹೇಳಿದ್ದ ವ್ಯಕ್ತಿ ಒಬ್ಬ ಬಂದು ಪೊಲೀಸ್ ಠಾಣೆಗೆ ಎಂದು ಹೇಳಿ ದಿಲೀಪ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ರೆಸಾರ್ಟ್ನಲ್ಲಿ ಬಂಧನ ಮಾಡಿ ಇರಿಸಿದ್ದಾನೆ. ಈ ಸಂದರ್ಭದಲ್ಲಿ ನೈಜ್ಯ ಪೊಲೀಸರು ರೆಸಾರ್ಟ್ಗೆ ದಾಳಿ ಮಾಡಿದ್ದು ಆರೋಪಿಗಳೆಲ್ಲಾ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.